
ಚಿಕ್ಕಮಗಳೂರು: ‘ಅಧಿಕಾರ ತಮ್ಮ ಬಳಿಯೇ ಇರಬೇಕು ಎಂಬ ಭಾವನೆ ಗಂಡಸರ ಮನಸ್ಸಿನಲ್ಲಿ ಇರುತ್ತದೆ. ಈ ದರ್ಪದಿಂದ ನನ್ನ ವಿರುದ್ಧ ಪತ್ರ ಚಳವಳಿ ಮಾಡಿಸಿದ್ದಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು.
‘ಈ ಹಿಂದಿನ ಲೋಕಸಭಾ ಚುನಾವಣೆಯಲ್ಲೂ ನನ್ನ ವಿರುದ್ಧ ‘ಗೋ ಬ್ಯಾಕ್’ ಚಳವಳಿ ಮಾಡಿಸಿದ್ದರು. ಈಗಲೂ ಹಣದ ಮದದಿಂದ ಇದೇ ರೀತಿಯ ಪತ್ರ ಚಳವಳಿ ಮಾಡಿಸಿದ್ದಾರೆ. ಅವರಿಗೆ ನಮ್ಮ ಪಕ್ಷದ ಹಿರಿಯರು ಮತ್ತು ಹೈಕಮಾಂಡ್‌ನವರು ಉತ್ತರ ನೀಡಲಿದ್ದಾರೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಹೈಕಮಾಂಡ್ ಈವರೆಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಪಕ್ಷಕ್ಕೆ ಸಣ್ಣ ಕಪ್ಪುಚುಕ್ಕೆಯೂ ಬರದಂತೆ ನಡೆದುಕೊಂಡಿದ್ದೇನೆ. ಪತ್ರ ಯಾರು ಬರೆಸಿದರು ಎಂಬ ವರದಿಯನ್ನು ಕೇಂದ್ರದ ಹೈಕಮಾಂಡ್ ತರಿಸಿಕೊಂಡಿದೆ. ಸತ್ಯಾಂಶವನ್ನು ಬಿಜೆಪಿ ರಾಜ್ಯ ಘಟಕ ನೀಡಿದೆ ಎಂಬ ವಿಶ್ವಾಸವಿದೆ. ಆದ್ದರಿಂದ ಈ ಬೆಳವಣಿಗೆಗೆ ನಾನು ಉತ್ತರ ಕೊಡುವುದಿಲ್ಲ, ಹೈಕಮಾಂಡ್ ಉತ್ತರ ನೀಡಲಿದೆ’ ಎಂದರು.
‘ಶೋಭಾ ಅವರು ಮೊದಲು ತಮ್ಮ ಟಿಕೆಟ್ ಉಳಿಸಿಕೊಳ್ಳಲಿ’ ಎಂಬ ಸಚಿವ ಎಂ.ಬಿ.ಪಾಟೀಲ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಏನೆಲ್ಲ ನಡೆಯುತ್ತಿದೆ ಎಂಬುದು ಲೋಕಸಭೆ ಚುನಾವಣೆ ಬಳಿಕ ಬಹಿರಂಗವಾಗಲಿದೆ. ತಮ್ಮ ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಆಗದ ಕಾಂಗ್ರೆಸ್, ಬಿಜೆಪಿ ಶಾಸಕರಿಗೆ ಕೈಹಾಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.