
ಶೃಂಗೇರಿ: ಇಲ್ಲಿನ ಶಾರದಾ ಪೀಠದ ನರಸಿಂಹವನದ ಗುರು ನಿವಾಸದಲ್ಲಿ ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ತಾಲ್ಲೂಕಿನ ನಾಗರಿಕರು ಹಾಗೂ ರೈತಾಪಿ ವರ್ಗದವರು, ತಾಲ್ಲೂಕಿನ ಸಮಸ್ಯೆಗಳ ಕುರಿತು ನಿವೇದನಾ ಪತ್ರ ನೀಡಿದರು.
ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ‘ಅರಣ್ಯ ಇಲಾಖೆಯ ಏಕಮುಖ ಕಾಯ್ದೆಗಳಿಂದ ಮಲೆನಾಡಿನ ಜನರ ಬದುಕು ಕಿತ್ತುಕೊಳ್ಳುತ್ತಿದೆ. 2002ರಲ್ಲಿ ಜಿಲ್ಲಾಧಿಕಾರಿ ಗೋಪಾಲಕೃಷ್ಣೇಗೌಡ ಅವರು ಜಿಲ್ಲೆಯ 55 ಸಾವಿರ ಹೆಕ್ಟೇರ್ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದ್ದು, ಇದರಿಂದ ಸಾಗುವಳಿ ಮಾಡಿಕೊಂಡ ರೈತರು ಅರ್ಜಿ ನಮೂನೆ 50, 51, 53 ಮತ್ತು 57ರಲ್ಲಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಜೊತೆಗೆ ತಾಲ್ಲೂಕಿನ ಬಡ ಕುಟುಂಬದವರು ಮನೆ ಕಟ್ಟಿಕೊಂಡು ವಾಸವಾಗಿದ್ದು, ಅವರು ಕೂಡ ಕಾಯ್ದೆಗಳಿಂದ ಪರಿತಪಿಸುವಂತಾಗಿದೆ. ಬ್ರಿಟಿಷರ ಕಾಲದಿಂದ ರೈತಾಪಿ ವರ್ಗ ಸೊಪ್ಪು, ದರಗು ಇತ್ಯಾದಿ ಬಳಕೆಗೆ ಸೊಪ್ಪಿನಬೆಟ್ಟದ ಜಮೀನು ಬಳಸುತ್ತಿದ್ದು ಯಾವುದೇ ಪ್ರಕ್ರಿಯೆ ಇದುವರೆಗೆ ಚಾಲನೆಗೊಂಡಿಲ್ಲ. ಸಂಬಂಧಪಟ್ಟವರ ಜೊತೆ ವಿಷಯಗಳನ್ನು ಸಮಾಲೋಚಿಸಿ 10 ಸಾವಿರ ಹೆಕ್ಟೇರ್ ಹಿಂಪಡೆಯುವ ಪ್ರಕ್ರಿಯೆ ಸೇರಿದಂತೆ ಸೊಪ್ಪಿನಬೆಟ್ಟ ಮಂಜೂರಾತಿಗೆ ತಮ್ಮ ಮಾರ್ಗದರ್ಶನದ ಅಗತ್ಯವಿದ್ದು, ರೈತರ ಪರವಾಗಿ ಸರ್ಕಾರದ ಗಮನ ತಾವು ಸೆಳೆದು ತಾಲ್ಲೂಕಿನ ರೈತರ ಬವಣೆ ನೀಗಿಸಬೇಕು’ ಎಂದರು.
ಮುಖಂಡರಾದ ನೂತನ್ ಕುಮಾರ್ ಮಾತನಾಡಿ, ‘ಶೃಂಗೇರಿ-ಕೆರೆಕಟ್ಟೆ ಮಾರ್ಗವಾಗಿ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-169ರ ವಿಸ್ತರಣೆ ವಿಚಾರ ಮಠದ ಹಿಂದಿನ ಗುರುಗಳಾದ ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಅವರ ಕಾಲಘಟ್ಟದಲ್ಲಿ ಘೋಷಣೆಯಾಗಿದೆ. ಸೊಲ್ಲಾಪುರ-ಮಂಗಳೂರಿಗೆ ಸಂಪರ್ಕ ಸಾಧಿಸುವ ಹೆದ್ದಾರಿ ರಸ್ತೆ ಕೆರೆಕಟ್ಟೆ ಮೂಲಕ ಶೃಂಗೇರಿಗೆ ಬರುವ ಪ್ರಮುಖ ರಸ್ತೆಯಾಗಿದೆ. ಕ್ಷೇತ್ರಕ್ಕೆ ಬರುವ ಲಕ್ಷಾಂತರ ಪ್ರವಾಸಿಗರು ಈ ಮಾರ್ಗದ ಮೂಲಕ ಸಂಚರಿಸುತ್ತಾರೆ. ವಿಮಾನ ನಿಲ್ದಾಣ ಹಾಗೂ ಮಣಿಪಾಲ, ಮಂಗಳೂರು ಆಸ್ಪತ್ರೆಗೆ ತೆರಳಲು ಈ ರಸ್ತೆ ಎಲ್ಲರಿಗೂ ಅನುಕೂಲವಾಗಿದೆ. ವನ್ಯಜೀವಿ ಮಂಡಳಿ ಹಾಗೂ ಅರಣ್ಯ ಇಲಾಖೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆಯಾದ ಬಳಿಕ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಕಿರಿದಾದ ರಸ್ತೆಯಿಂದ ಸಾಕಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಕುರಿತು ಕೂಡ ತಾವು ಸಂಬಂಧಪಟ್ಟವರ ಗಮನಕ್ಕೆ ತಂದು ಶಾಶ್ವತ ಪರಿಹಾರ ನೀಡಬೇಕು’ ಎಂದರು.
ತಾಲ್ಲೂಕಿನ ನಾಗರಿಕರಾದ ರಾಜೇಶ್ ದ್ಯಾವಂಟು, ನಾಗೇಂದ್ರರಾವ್ ಕಚಿಗೆ, ಅರವಿಂದ ಸಿಗದಾಳು, ಪ್ರಸನ್ನ ಬೇಗಾನೆ, ಎಚ್.ಎಸ್. ಸುಬ್ರಹ್ಮಣ್ಯ, ಮೇಗಳಬೈಲ್ ರಾಜೇಶ್ ಇದ್ದರು.
ರೈತಾಪಿ ಹಾಗೂ ನಾಗರಿಕರು ನೀಡಿದ ನಿವೇದನಾ ಪತ್ರದ ಮಾಹಿತಿಯನ್ನು ಶಾರದಾ ಮಠದ ಆಡಳಿತಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಲು ಒತ್ತಾಯಿಸುತ್ತೇವೆವಿಧುಶೇಖರಭಾರತೀ ಸ್ವಾಮೀಜಿ ಮಠದ ಗುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.