ADVERTISEMENT

ಸ್ನೇಕ್ ನರೇಶ್ ಕುಮಾರ್‌ ಮನೆಯಲ್ಲಿ 79 ಹಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಮೇ 2023, 16:24 IST
Last Updated 31 ಮೇ 2023, 16:24 IST
ಚಿಕ್ಕಮಗಳೂರಿನ ಸ್ನೇಕ್ ನರೇಶ್‌ ಮನೆ ತಪಾಸಣೆ ವೇಳೆ ಕಂಡು ಬಂದ ಹಾವಿನ ಮರಿಗಳು
ಚಿಕ್ಕಮಗಳೂರಿನ ಸ್ನೇಕ್ ನರೇಶ್‌ ಮನೆ ತಪಾಸಣೆ ವೇಳೆ ಕಂಡು ಬಂದ ಹಾವಿನ ಮರಿಗಳು   

ಚಿಕ್ಕಮಗಳೂರು: ಸೆರೆ ಹಿಡಿದಿದ್ದ ಹಾವು ಕಚ್ಚಿ ಮೃತಪಟ್ಟ ಉರಗ ಪ್ರೇಮಿ ಸ್ನೇಕ್‌ ನರೇಶ್ ಕುಮಾರ್‌ ಮನೆಯಲ್ಲಿ 35 ಮರಿಗಳು ಸಹಿತ 79 ಹಾವುಗಳು ಪತ್ತೆಯಾಗಿವೆ.

ಸ್ನೇಕ್‌ ನರೇಶ್‌ ಕುಮಾರ್‌ ಅಂತ್ಯಕ್ರಿಯೆ ಬಳಿಕ ಕೆಲ ವನ್ಯಜೀವಿ ಪ್ರಿಯರು ಬಣಕಲ್‍ನ ಸ್ನೇಕ್ ಆರೀಫ್ ಎಂಬುವರೊಂದಿಗೆ ಸ್ನೇಕ್ ನರೇಶ್ ಕುಮಾರ್‌ ಮನೆಗೆ ತೆರಳಿದ್ದರು. ಮನೆಯಲ್ಲಿದ್ದ ಹಾವುಗಳನ್ನು ಕಾಡಿಗೆ ಬಿಡಲು ಕಾರು, ಬೈಕ್‌, ಮನೆ ಪರಿಶೀಲಿಸಿದಾಗ ನಾಗರಹಾವು, ಕೊಳಕುಮಂಡಲ ಸಹಿತ ವಿವಿಧ ಜಾತಿಯ  ಹಾವು, ಮರಿಗಳು ಪತ್ತೆಯಾಗಿವೆ.

ಇದನ್ನೂ ಓದಿ: ಚಿಕ್ಕಮಗಳೂರು: ಹಾವು ಕಚ್ಚಿ ಸ್ನೇಕ್‌ ನರೇಶ್‌ ಸಾವು

ADVERTISEMENT

ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ನರೇಶ್ ಮನೆ ತಪಾಸಣೆ ಮಾಡಿದಾಗ ಕಾರು, ಬ್ಯಾರಲ್‍ಗಳಲ್ಲೂ ಹಾವುಗಳು ಕಂಡು ಬಂದವು. ಬ್ಯಾರಲ್‍ವೊಂದರಲ್ಲಿ ಇಟ್ಟಿದ್ದ ಹಾವು 35 ಮರಿಗಳನ್ನು ಹಾಕಿತ್ತು.

‘ಸ್ನೇಕ್ ನರೇಶ್ ಕುಮಾರ್‌ ಅವರ ಮನೆಯಲ್ಲಿ 35 ಮರಿಗಳು ಸಹಿತ ಒಟ್ಟು 79 ಹಾವುಗಳು ಪತ್ತೆಯಾಗಿವೆ. ಕೊಳಕು ಮಂಡಲ, ಕೆರೆ ಹಾವು, ನಾಗರಹಾವುಗಳು ಸಿಕ್ಕಿವೆ’ ಎಂದು ಡಿಎಫ್ಒ ಎನ್.ಇ.ಕ್ರಾಂತಿ 'ಪ್ರಜಾವಾಣಿ'ಗೆ ತಿಳಿಸಿದರು.

'ಹಾವುಗಳನ್ನು ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದರು ಎಂಬ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಅವರ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ವಶಕ್ಕೆ ಪಡೆಯಲಾಗಿದೆ. ಫೋನ್ ಕರೆ ಮಾಹಿತಿ ಕಲೆ ಹಾಕಲಾಗುತ್ತಿದೆ' ಎಂದು ಅವರು ತಿಳಿಸಿದರು.

ಬೈಕ್‌ನ ಬಾಕ್ಸ್‌ನೊಳಗಿನ ಚೀಲದಲ್ಲಿದ್ದ ಇಟ್ಟಿದ್ದ ಹಾವು ಕಚ್ಚಿ ನರೇಶ್ ಕುಮಾರ್‌ ಅವರು ಮಂಗಳವಾರ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.