ADVERTISEMENT

ಶೃಂಗೇರಿ: ಸಮೀಕ್ಷೆಯ ಗಣತಿದಾರರಿಗೆ ಕಿಟ್ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:14 IST
Last Updated 23 ಸೆಪ್ಟೆಂಬರ್ 2025, 5:14 IST
ಶೃಂಗೇರಿಯ ತಾಲ್ಲೂಕು ಕಚೇರಿಯಲ್ಲಿ  ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವ ಗಣತಿದಾರರಿಗೆ ಸೋಮವಾರ ತಹಶೀಲ್ದಾರ್ ಅನುಪ್ ಸಂಜೋಗ್ ಕಿಟ್‍ ವಿತರಿಸಿದರು 
ಶೃಂಗೇರಿಯ ತಾಲ್ಲೂಕು ಕಚೇರಿಯಲ್ಲಿ  ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವ ಗಣತಿದಾರರಿಗೆ ಸೋಮವಾರ ತಹಶೀಲ್ದಾರ್ ಅನುಪ್ ಸಂಜೋಗ್ ಕಿಟ್‍ ವಿತರಿಸಿದರು    

ಶೃಂಗೇರಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದರೆ ಒಂದು ದೇಶದಲ್ಲಿ ವಿವಿಧ ಜಾತಿಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ. ಸರ್ಕಾರವು ಹಿಂದುಳಿದ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ರಮ, ನೀತಿಗಳು ಮತ್ತು ಮೀಸಲಾತಿಗಳನ್ನು ರೂಪಿಸಲು ಈ ಮಾಹಿತಿ ಅಗತ್ಯ’ ಎಂದು ತಹಶೀಲ್ದಾರ್ ಅನುಪ್ ಸಂಜೋಗ್ ಹೇಳಿದರು.

ಶೃಂಗೇರಿಯ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿದಾರರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.

`ಬಡತನ, ಅನಕ್ಷರತೆ ಮತ್ತು ಅಸಮಾನತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಯಾವ ಸಮುದಾಯಗಳು ಹೆಚ್ಚು ಬಾಧಿತವಾಗಿವೆ ಎಂದು ತಿಳಿಯುವುದು ಬಹಳ ಮುಖ್ಯ. ಆದರಿಂದ ಜನರು ಈ ಸಮೀಕ್ಷೆಗೆ ನಿಖರ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕು. ಅವರ ಪ್ರಾಮಾಣಿಕ ಸಹಭಾಗಿತ್ವದಿಂದ ಸರ್ಕಾರದ ಸಾಮಾಜಿಕ ರಚನೆ ಮತ್ತು ಜನರ ಅಗತ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಭಾಗವಹಿಸುವುದರಿಂದ, ಜನರು ತಮ್ಮ ಸಮುದಾಯಗಳ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಿದಂತಾಗುತ್ತದೆ' ಎಂದರು.

ADVERTISEMENT

 ರಾಜ್ಯ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜಿ ನಾಗೇಶ್ ಮಾತನಾಡಿ, `ಸಮೀಕ್ಷೆ ಮಾಡುವ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅವರಿಗೆ ಸಮೀಕ್ಷೆಯ ಉದ್ದೇಶ ಮತ್ತು ಪ್ರಯೋಜನಗಳನ್ನು ಸ್ಪಷ್ಟವಾಗಿ ವಿವರಿಸಬೇಕು' ಎಂದರು.

ತಾಲ್ಲೂಕು ಪಂಚಾಯಿತಿ ಇ.ಒ ಸುಧೀಪ್ ಮಾತನಾಡಿ, `ಈ ಸಮೀಕ್ಷೆ ಜನರ ಕಲ್ಯಾಣಕ್ಕಾಗಿ ಏಕೆ ಮುಖ್ಯ ಎಂಬುದನ್ನು ತಿಳಿಸಲು ಕರಪತ್ರಗಳು, ಸಾರ್ವಜನಿಕ ಸಭೆಗಳು ಮತ್ತು ಸ್ಥಳೀಯ ಮಾಧ್ಯಮಗಳಿಂದ ತಿಳಿದಾಗ ಈ ರೀತಿಯ ಸಂವಹನವು ಜನರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮುಕ್ತವಾಗಿ ಹಾಗೂ ಪ್ರಾಮಾಣಿಕವಾಗಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ’ ಎಂದರು.

ಈ ಸಂದರ್ಭದಲ್ಲಿ ಸಮೀಕ್ಷೆಗೆ ಚಾಲನೆ ನೀಡಿದರು. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್ ಹಂದಿಗೋಡು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶ್ವಿನಿ ಎ.ಎಂ, ಪ್ರವೀಣ್, ವಿಜಯ್ ಕುಮಾರ್, ಗಣತಿದಾರರು, ಮೇಲ್ವೀಚಾರಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.