ADVERTISEMENT

ನರಸಿಂಹರಾಜಪುರ: ಸೋಲಾರ್ ಟೆಂಟಕಲ್ ಬೇಲಿ ಅಳವಡಿಕೆಗೆ ಸಿದ್ಧತೆ

ನರಸಿಂಹರಾಜಪುರ: ಕಾಡಾನೆಗಳ ಉಪಟಳ ತಡೆಗೆ ₹1.12 ಕೋಟಿ ಬಿಡುಗಡೆ

ಕೆ.ವಿ.ನಾಗರಾಜ್
Published 11 ನವೆಂಬರ್ 2025, 3:58 IST
Last Updated 11 ನವೆಂಬರ್ 2025, 3:58 IST
ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸೋಲಾರ್ ಟೆಂಟಕಲ್ ಬೇಲಿ (ಸಂಗ್ರಹ ಚಿತ್ರ)
ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸೋಲಾರ್ ಟೆಂಟಕಲ್ ಬೇಲಿ (ಸಂಗ್ರಹ ಚಿತ್ರ)   

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ರೈತರು ಬೆಳೆದ ಬೆಳೆಹಾನಿ ಜತೆಗೆ ಜೀವಹಾನಿಯು ಸಂಭವಿಸಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ನರಸಿಂಹರಾಜಪುರ ವಲಯ ಅರಣ್ಯ ವ್ಯಾ‍ಪ್ತಿಯಲ್ಲಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ 2025–26ನೇ ಸಾಲಿಗೆ ₹1.12 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯ ಭದ್ರಾಹಿನ್ನೀರು ಪ್ರದೇಶದ ಲಿಂಗಾಪುರ ಗ್ರಾಮದ ಚಂದ್ರಪ್ಪ ತೋಟದಿಂದ ಹೂವಣ್ಣಗೌಡ ತೋಟದವರೆಗೆ 2,800ಮೀ, ಹಳೇದಾನಿವಾಸ ಗ್ರಾಮದ ಚುಂಚನಮನೆ ಬ್ಲಾಕ್ ವ್ಯಾಪ್ತಿಯಲ್ಲಿ 1,350 ಮೀ, ದಾನಿವಾಸ ಗ್ರಾಮದ ಮುದುಕೂರಿನ ಅಮ್ಜದ್ ತೋಟದಿಂದ ವಿಠಲ ಗ್ರಾಮದ ಮಧು ಅವರ ತೋಟದವರೆಗೆ, 4 ಕಿ.ಮೀ, ವಿಠಲ ಗ್ರಾಮದ ಕೆಸವೆ ಕೋಗುವಿನಿಂದ ಆನೆ ಕೋಗುವರೆಗೆ 5.058 ಮೀಟರ್‌, ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಹಂಚಿನಕೊಡಿಗೆಯಿಂದ ತಮ್ಮಯ್ಯನ ತೋಟದವರೆಗೆ 745 ಮೀಟರ್‌ ಸೇರಿ ಒಟ್ಟು 13.953 ಕಿ.ಮೀ ಸೋಲಾರ್ ಟೆಂಟಕಲ್ ಫೆಸಿಂಗ್ ನಿರ್ಮಿಸಲು ಉದ್ದೇಶಸಲಾಗಿದ್ದು, 1 ಕಿ.ಮೀಗೆ ₹7,17,426 ರರಂತೆ ಅನುದಾನ ಬಿಡುಗಡೆ ಮಾಡಿದೆ.

ಶೃಂಗೇರಿ ತಾಲ್ಲೂಕಿನ ಕೆ.ಮಸಿಗೆ ಗ್ರಾಮದ ತರೊಳ್ಳಿ ಕೂಡಿಗೆ ಸರ್ವೆ ನಂ 1ರ ರೇವಣ್ಣ ಮನೆಯಿಂದ ಕೆ.ಮಸಿಗೆ ಗ್ರಾಮದ ತರೊಳ್ಳಿ ಕೂಡಿಗೆ ಸರ್ವೆ ನಂ6ರ ರೇವಣ್ಣ ಅವರ ಸಾಗುವಳಿ ಭೂಮಿವರೆಗೆ 518 ಮೀಟರ್, ಇದೇ ಗ್ರಾಮದ ಸರ್ವೆ ನಂ 7ರ ಶ್ರೀನಿವಾಸ್ ಅವರ ಸಾಗುವಳಿ ಭೂಮಿಯಿಂದ ಸರ್ವೆ ನಂ 9ರ ಗಣೇಶ್ ಅವರ ಸಾಗುವಳಿ ಭೂಮಿಯವರೆಗೆ 790 ಮೀಟರ್ ಹಾಗೂ ಸರ್ವೆ ನಂ1ರ ಶಿವಪ್ಪ ಎಫ್‌ಆರ್‌ಎ ಮಂಜೂರಾತಿ ಭೂಮಿಯಿಂದ ಸರ್ವೆ ನಂ 1ರ ರವೀಂದ್ರ ಅವರ ಸಾಗುವಳಿ ಭೂಮಿವರೆಗೆ 420 ಮೀಟರ್ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ.

ADVERTISEMENT

ನರಸಿಂಹರಾಜಪುರ ಹಾಗೂ ಶೃಂಗೇರಿ ಎರಡು ತಾಲ್ಲೂಕು ಸೇರಿ ಒಟ್ಟು 15.681 ಕಿ.ಮೀಗೆ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ₹1.12,49,957 ಅನುದಾನ ಬಿಡುಗಡೆ ಮಾಡಲಾಗಿದೆ.

ಕಾಡಾನೆಗಳ ಉಪಟಳ ಹೆಚ್ಚಾಗಿರುವ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಮೊದಲು ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಲಾಗುವುದು. ಅನುದಾನ ಬಿಡುಗಡೆಯಾದಂತೆ ಉಳಿದ ಭಾಗಗಳಲ್ಲೂ ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಲಾಗುವುದು ಎಂದು ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಾನೆಗಳ ಉಪಟಳ ತಡೆಗಟ್ಟಲು ಶೀಘ್ರ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಅವರು ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ 2018ರಲ್ಲಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಿದ್ದು, ಸಮರ್ಪಕ ನಿರ್ವಹಣೆಯಿಂದ ಕಾಡಾನೆಗಳು ಜನವಸತಿ ಪ್ರದೇಶಗಳಿಗೆ, ತೋಟಗಳಿಗೆ ಬರದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ನಿರ್ವಹಣೆಯನ್ನು ಅರಣ್ಯ ಇಲಾಖೆಯವರು ಈ ಭಾಗದಲ್ಲೂ ಮಾಡಿದರೆ ಕಾಡಾನೆ ಹಾವಳಿ ಸಮಸ್ಯೆಗೆ ಪರಿಹಾರ ಲಭಿಸುತ್ತದೆ ಎಂದು ಶಿವಮೊಗ್ಗ ಭದ್ರಾಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಸಾರ್ಯ ಗ್ರಾಮದ ವ್ಯಾಪ್ತಿಯಲ್ಲಿ 7 ಕೆ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಡಿಪಿಆರ್ ರಚಿಸಿ ₹12 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಚಿಕ್ಕಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ್ ತಿಳಿಸಿದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ 13.953 ಕಿ.ಮೀ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣ | 1ಕಿ.ಮೀ ಬೇಲಿ ನಿರ್ಮಾಣಕ್ಕೆ ₹7.17 ಲಕ್ಷ ನಿಗದಿ |  7 ಕಿ,ಮೀ ರೈಲ್ವೆ ಬ್ಯಾರಿಕೇಟ್ ನಿರ್ಮಾಣಕ್ಕೆ ₹12 ಕೋಟಿ ಬಿಡುಗಡೆಗೆ ಪ್ರಸ್ತಾವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.