ಮೂಡಿಗೆರೆ: ಮುಂಗಾರು ಮಳೆ ಅಧಿಕವಾಗಿರುವುದರಿಂದ ಕಾಫಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಳ್ಳುವ ಅಪಾಯವಿದ್ದು, ರೈತರು ಬೋರ್ಡೋ ದ್ರಾವಣ ಸಿಂಪಡಿಸಬೇಕು ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕ ಅಧಿಕಾರಿ ವಿಶ್ವನಾಥ್ ಹೇಳಿದರು.
ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಡಿ ಗ್ರಾಮದ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ʼಕಾಫಿ ಬೆಳೆಯಲ್ಲಿ ಶೀತದಿಂದ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದು ಮುಖ್ಯ. ಮಣ್ಣಿನ ಪರೀಕ್ಷೆಯನ್ನು ನಡೆಸಿ, ಅಗತ್ಯವಾದ ಪೋಷಕಾಂಶಗಳನ್ನು ನೀಡಬೇಕು. ಹಿಂದೆ ಅರೇಬಿಕಾ ಕಾಫಿಯು ರೋಗ ಮುಕ್ತ ಕಾಫಿ ಎಂದು ಕರೆಯಲಾಗುತ್ತಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅರೇಬಿಕಾ ಕಾಫಿಗೂ ರೋಗ ತಗಲುವ ಭೀತಿ ಕಾಡುತ್ತಿದ್ದು, ಅವುಗಳಿಗೂ ಸೂಕ್ತ ನಿರ್ವಹಣೆ ಅಗತ್ಯವಾಗಿದೆ. ಕಾರ್ಮಿಕರ ಕೊರತೆಯಿಂದ ನುರಿತ ಕಾರ್ಮಿಕರಿಲ್ಲದೆ ಸಮಯಕ್ಕೆ ಸರಿಯಾಗಿ ಕೀಟದ ಹತೋಟಿ ಕ್ರಮವನ್ನು ತೆಗೆದುಕೊಳ್ಳದೇ ಇರುವುದರಿಂದ ಕಾಂಡ ಕೊರಕ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆ ಹೆಚ್ಚಳದಿಂದಾಗಿ ಕೀಟ ಬಾಧಿತ ಗಿಡಗಳನ್ನು ತೆಗೆಯದೆ ಇರುವುದು. ಹೆಚ್ಚಿನ ಫಸಲು ಪಡೆಯಲು ಹಾಗೂ ಮಳೆ, ಕಾರ್ಮಿಕರ ಕೊರತೆಯ ಕಾರಣದಿಂದಾಗಿ ಒಂದೇ ಬಾರಿ ಹೆಚ್ಚಿನ ನೆರಳು ತೆಗೆಯುತ್ತಿರುವುದು ಕೂಡ ಕೀಟ ಹರಡಲು ಕಾರಣವಾಗುತ್ತಿದೆʼ ಎಂದು ಹೇಲಿದರು.
ಈ ವೇಳೆ ಕಾಫಿ ಬೆಳೆಗಾರರಾದ ಅರುಣ್ ಬಿನ್ನಡಿ, ಪ್ರದೀಪ್, ಸಂಜಯ್ ಗೌಡ, ಎ.ಆರ್.ಅಭಿಲಾಷ್, ರಾಜು, ವಿಜೇಂದ್ರ, ರಮೇಶ್, ಪ್ರಕಾಶ್, ಧರ್ಮರಾಜ್, ಸುನಿಲ್, ವಿನುತ, ಉಮೇಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.