ADVERTISEMENT

‘ಕೆರೆಕಟ್ಟೆ ಭಾಗದಲ್ಲಿ ಕಾಣಿಸಿಕೊಂಡ ಕಾಡಾನೆ ಸೆರೆ ಹಿಡಿಯಿರಿ’

ಕಾಡಾನೆ ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:14 IST
Last Updated 10 ಡಿಸೆಂಬರ್ 2025, 4:14 IST
ಶೃಂಗೇರಿಯ ಕೆರೆಕಟ್ಟೆಯ ಅರಣ್ಯ ಇಲಾಖೆ ಮುಂಭಾಗ ಕಾಣಿಸಿಕೊಂಡ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಮನವಿ ಪತ್ರವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿ.ಎಫ್.ೊ ಸಿವರಾಮ್ ಬಾಬು, ಆರ್.ಎಫ್.ಒ ಅನಿಲ್ ಕುಮಾರ್‌ ಅವರಿಗೆ ನೀಡಿದರು  
ಶೃಂಗೇರಿಯ ಕೆರೆಕಟ್ಟೆಯ ಅರಣ್ಯ ಇಲಾಖೆ ಮುಂಭಾಗ ಕಾಣಿಸಿಕೊಂಡ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಮನವಿ ಪತ್ರವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿ.ಎಫ್.ೊ ಸಿವರಾಮ್ ಬಾಬು, ಆರ್.ಎಫ್.ಒ ಅನಿಲ್ ಕುಮಾರ್‌ ಅವರಿಗೆ ನೀಡಿದರು     

ಶೃಂಗೇರಿ: ‘ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿಯಲ್ಲಿ ಕಳೆದೊಂದು ತಿಂಗಳ ಹಿಂದೆ ಆನೆ ದಾಳಿಗೆ ಇಬ್ಬರು ಅಮಾಯಕರು ಜೀವ ಕಳೆದುಕೊಂಡಿದ್ದು, ಈ ವಿಷಯ ಮಾಸುವ ಮುನ್ನವೇ ಮತ್ತೆ ಶೀರ್ಲು ಗ್ರಾಮದ ಆಣಲಕ್ಕಿ ಎಂಬಲ್ಲಿ 15 ದಿನದಿಂದ ಆನೆ ಕಾಣಿಸಿಕೊಂಡು ಜನರಿಗೆ ಉಪಟಳ ನೀಡುತ್ತಿದೆ. ಕೂಡಲೇ ಆನೆಯನ್ನು ಸೆರೆ ಹಿಡಿಯಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಒತ್ತಾಯಿಸಿದರು.

ಶೃಂಗೇರಿಯ ಕೆರೆಕಟ್ಟೆಯ ಅರಣ್ಯ ಇಲಾಖೆ ಮುಂಭಾಗ ಕಾಣಿಸಿಕೊಂಡ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಆ ಊರಿನಲ್ಲಿ ಮೂರು ಜನ ಮಹಿಳೆಯರು ಮಾತ್ರ ವಾಸವಿರುವ ಶೀತು ಮತ್ತು ಅವರ ಸಹೋದರಿಯರ ಕುಟುಂಬದ ಭತ್ತದ ಗದ್ದೆಗೆ ಕಾಡಾನೆ ಬಂದಿದ್ದು, ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಸಂಪೂರ್ಣ ತಿಂದು, ತುಳಿದು ನಾಶ ಪಡಿಸಿದೆ. ಪ್ರತಿದಿನ ಸಂಜೆ 6ಗಂಟೆಗೆ ಮನೆಯ ಸಮೀಪ ಬಂದು ಘೀಳಿಡುವ ಆನೆ, ಮನೆ ಮುಂದೆ ಬೆಳೆಸಿದ ಅಡಿಕೆ ಮರಗಳನ್ನು ಮುರಿದು ನಾಶಪಡಿಸುತ್ತಿದೆ. ಆನೆಯನ್ನು ಸ್ಥಳಾಂತರಿಸಬೇಕೆಂದು ಊರಿನವರೆಲ್ಲರೂ ಸೇರಿ ಅರಣ್ಯಾಧಿಕಾರಿಗಳಿಗೆ ಹಲವೂ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಅರಣ್ಯ ಇಲಾಖೆಯವರು ತಮ್ಮಲ್ಲಿರುವ 2-3 ಸಿಬ್ಬಂದಿಗಳನ್ನು ಕಳುಹಿಸಿ, ಪಟಾಕಿ ಹೊಡೆದು ಬರುವುದು ಹೊರತುಪಡಿಸಿದರೆ ಬೇರೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ’ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್ ಮಾತನಾಡಿ, ‘ಕೆರೆಕಟ್ಟೆಯಲ್ಲೇ ಹಿಂದೆ ಆಗಿರುವ ಅನಾಹುತ ಮತ್ತೆ ಶೀರ್ಲು ಗ್ರಾಮದಲ್ಲಿ ನಡೆದರೂ ಆಶ್ಚರ್ಯವಿಲ್ಲ. ಆದ್ದರಿಂದ ಶೀರ್ಲು ಗ್ರಾಮದ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಸಭೆ ಸೇರಿ ಮುಂದಿನ ದಿನಗಳಲ್ಲಿ ಬದುಕು ಹೇಗೆ ಎಂದು ಚರ್ಚಿಸಿ, ಆನೆ ಸ್ಥಳಾಂತರ ಮಾಡದಿದ್ದರೆ ಇಲ್ಲಿ ಎಲ್ಲಾ ಗದ್ದೆ-ತೋಟ ಮತ್ತು ಜೀವ ಹಾನಿಯು ಆಗುವುದು ನಿಶ್ಚಿತ. ಹಲವು ಬಾರಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೂ ತಂದರು ಅವರು ಇ.ಟಿ.ಎಫ್ ಕಳುಹಿಸಿದ್ದೇವೆ ಎಂದು ಸಬೂಬು ಹೇಳಿ ಕಾಲ ಕಳೆಯುತ್ತಿದ್ದು, ಇಲ್ಲಿನ ಗ್ರಾಮಸ್ಥರಿಗೆ ಯಾವುದೇ ಉಪಯೋಗವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಆನೆಯಿಂದ ಅನಾಹುತ ಸಂಭವಿಸಿದರೆ ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಪತ್ರವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಡಿ.ಎಫ್.ಒ ಸಿವರಾಮ್ ಬಾಬು, ಆರ್.ಎಫ್.ಒ ಅನಿಲ್ ಕುಮಾರ್‌ ಅವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸ್ ಕಚ್ಚೋಡಿ, ಬಿ.ಶಿವಶಂಕರ್, ನವೀನ್ ಎಚ್.ಕೆ., ಚಂದ್ರಶೇಖರ್ ಕಾರ್‍ಬೈಲ್, ರಾಜೇಶ್ ದ್ಯಾವಂಟು, ವಿಜಯ್ ಕುಮಾರ್ ತಿಪ್ಪನಮಕ್ಕಿ, ಎಚ್.ಎಸ್. ವೇಣುಗೋಪಾಲ್, ಸುರೇಶ್ ಜಟಕೇಶ್ವರ, ಕೆಂಪಣ್ಣ ಮತ್ತು ಗ್ರಾಮಸ್ಥರು ಇದ್ದರು.

Quote - ಆನೆ ನಿಗ್ರಹ ಕಾರ್ಯಪಡೆ ಅವರನ್ನು ನಿಯೋಜಿಸಿ ಆನೆಯನ್ನು ಈ ಜಾಗದಿಂದ ಭಗವತಿ ಕಡೆಗೆ ಓಡಿಸಲು ಕ್ರಮ ಕೈಗೋಳ್ಳುತ್ತೇವೆ ಸಿವರಾಮ್ ಬಾಬು ಡಿ.ಎಫ್.ಒ ವನ್ಯಜೀವಿ ವಿಭಾಗ

‘₹1 ಕೋಟಿ ಪರಿಹಾರ ನೀಡಿ’

ಕಾಡಾನೆ ದಾಳಿಗೆ 2 ಅಮಾಯಕ ಜೀವ ಬಲಿಯಾದ ನಂತರ ಶಾಸಕ ಟಿ.ಡಿ. ರಾಜೇಗೌಡರು ಕಳೆದ ನ. 17ರಂದು ಅರಣ್ಯ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಅರಣ್ಯ ಇಲಾಖೆಯ ಮೇಲಾಧಿಕಾರಿಯನ್ನು ಒಳಗೊಂಡಂತೆ ಜನಸಂಪರ್ಕ ಸಭೆ ನಡೆಸಿ ಈ ಭಾಗದ ಜನರಿಗೆ ಉತ್ತಮ ಪರಿಹಾರ ಪ್ಯಾಕೇಜ್‍ ಅನ್ನು ನೀಡಿ ಪುನರ್ ವಸತಿ ಕಲ್ಪಿಸುತ್ತೇನೆ ಎಂದು ಸುಳ್ಳು ಭರವಸೆಯನ್ನು ನೀಡಿ ಆ ದಿನ ಪ್ರತಿಭಟನೆಯ ಕಾವನ್ನು ತಣ್ಣಾಗಾಗಿಸುತ್ತಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಅರುಣ್ ಕುಮಾರ್ ದೂರಿದರು. ಈ ಕೂಡಲೇ ಇಲ್ಲಿ ಸುತ್ತಮುತ್ತಲಿರುವ ಆನೆಗಳನ್ನು ಸ್ಥಳಾಂತರಿಸಬೇಕು. ಇನ್ನು ಮುಂದೆ ಆನೆ ಬಾರದಂತೆ ಸೂಕ್ತ ಕ್ರಮ ವಹಿಸಿ ಈ ಹಿಂದೆ ತಿಳಿಸಿದಂತೆ ಅರಣ್ಯ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಅರಣ್ಯ ಇಲಾಖೆಯವರೊಂದಿಗೆ ಜನಸಂಪರ್ಕ ಸಭೆ ನಡೆಸಿ ಪರಿಹಾರವನ್ನು ಘೋಷಣೆ ಮಾಡಬೇಕು. ಮುಂದೆ ಆನೆಯಿಂದ ಮೃತಪಟ್ಟರೆ ₹1 ಕೋಟಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.