ADVERTISEMENT

ಆಟೊ ಚಾಲಕರು ಸಮಾಜದ ಜೀವನಾಡಿ: ಟಿ.ಡಿ.ರಾಜೇಗೌಡ 

ನೂತನ ಆಟೋ ನಿಲ್ದಾಣವನ್ನು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:24 IST
Last Updated 25 ಡಿಸೆಂಬರ್ 2025, 6:24 IST
ಶೃಂಗೇರಿ ಶಾರದಾ ನಗರದ ಸಂತೆ ಮಾರುಕಟ್ಟೆ ಸಮೀಪ ಅಮೃತ್ ನಗರೋತ್ಥಾನ ಯೋಜನೆಯಡಿ ನೂತನ ಆಟೊ ನಿಲ್ದಾಣವನ್ನು ಬುಧವಾರ ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು 
ಶೃಂಗೇರಿ ಶಾರದಾ ನಗರದ ಸಂತೆ ಮಾರುಕಟ್ಟೆ ಸಮೀಪ ಅಮೃತ್ ನಗರೋತ್ಥಾನ ಯೋಜನೆಯಡಿ ನೂತನ ಆಟೊ ನಿಲ್ದಾಣವನ್ನು ಬುಧವಾರ ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು    

ಶೃಂಗೇರಿ: ‘ನಮ್ಮ ದಿನ ನಿತ್ಯದ ಜೀವನದ ಸಾರಿಗೆ ವ್ಯವಸ್ಥೆಯಲ್ಲಿ ಆಟೊ ಚಾಲಕರು ಸಮಾಜದ ಜೀವನಾಡಿಗಳು. ಬಸ್ ಮತ್ತು ರೈಲುಗಳು ತಲುಪಲಾಗದ ಸಣ್ಣ ಗಲ್ಲಿಗಳು ಮತ್ತು ಕುಗ್ರಾಮಗಳಿಗೆ ಜನರನ್ನು ತಲುಪಿಸುವಲ್ಲಿ ಆಟೊ ಚಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರಿಗೆ ಸರ್ಕಾರದ ಈ ರೀತಿಯ ಮೂಲ ಸೌಕರ್ಯ ನೀಡಬೇಕು’ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಶೃಂಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾರದಾ ನಗರದ ಸಂತೆ ಮಾರುಕಟ್ಟೆ ಸಮೀಪ ಬುಧವಾರ ಅಮೃತ್ ನಗರೋತ್ಥಾನ ಯೋಜನೆಯಡಿ ₹6 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಆಟೊ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಧ್ಯರಾತ್ರಿ ಇರಲಿ ಅಥವಾ ಮಳೆಯಿರಲಿ, ಆಂಬುಲೆನ್ಸ್ ಸಿಗದಂತಹ ತುರ್ತು ಸಂದರ್ಭಗಳಲ್ಲಿ ಆಟೊ ಚಾಲಕರು ಗರ್ಭಿಣಿಯರು, ರೋಗಿಗಳನ್ನು ಮತ್ತು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಸೇವಕರು. ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ₹35 ಕೋಟಿ ವೆಚ್ಚದ ನೂರು ಹಾಸಿಗೆ ಆಸ್ಪತ್ರೆ, ಜಯಪುರದಲ್ಲಿ 30 ಹಾಸಿಗೆ ಆಸ್ಪತ್ರೆಯ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕೊಪ್ಪದಿಂದ ಶಿವಮೊಗ್ಗ ಏರ್‌ಪೋರ್ಟ್‍ಗೆ ತನಕದ ರಸ್ತೆ ಕಾಮಗಾರಿಗಾಗಿ ₹19 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ವರ್ಷ ಎನ್.ಆರ್.ಪುರ, ಜಯಪುರ, ಹರಿಹರಪುರ ರಸ್ತೆ ವಿಸ್ತರಣೆ ಮಾಡಲಾಗುವುದು. ಮುಂದಿನ ವರ್ಷ ಕೊಪ್ಪ, ಶೃಂಗೇರಿ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಬೀದಿ, ಶಾರದಾ ಪೀಠದ ಸಮೀಪ, ಸ್ವಾಗತ ಮಂಟಪ ಸಮೀಪ ಮತ್ತು ಬಸ್ ನಿಲ್ದಾಣದ ಆಟೊ ನಿಲ್ದಾಣ ನೂತನವಾಗಿ ನಿರ್ಮಿಸುತ್ತೇವೆ ಎಂದು ಶಾಸಕರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ರಫೀಕ್ ಅಹಮದ್, ಅರುಣ್, ಮುಖ್ಯಾಧಿಕಾರಿ ಸರಸ್ವತಿ ಷಣ್ಮುಗ ಸುಂದರಿ,  ಪ್ರಭಾರ ತಹಶೀಲ್ದಾರ್ ರಾಮ್‍ರಾವ್ ದೇಸಾಯಿ, ಆಟೊಚಾಲಕ ಸಂಘದ ಸಂಸ್ಥಾಪಕ ಅಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ, ಆಟೊ ಚಾಲಕ ಸಂಘದ ಅಧ್ಯಕ್ಷ ರವಿ ಕಲ್ಕಟ್ಟೆ, ರಮೇಶ್ ಭಟ್ ಕೊಡತಲು, ನಾಗೇಶ್ ಕೊಡತಲು, ದಿನೇಶ್ ಹೆಗ್ಡೆ, ಶಕೀಲಾ ಗುಂಡಪ್ಪ, ಮರಳೀಧರ ಪೈ, ದಿನೇಶ್ ಶೆಟ್ಟಿ, ರಾಘವೇಂದ್ರ, ಅಜಿಜ್, ಶ್ರೀಕರ ವೈಕುಂಠಪುರ, ನಿಸಾರ್ ಅಹಮದ್, ಆಟೊ ಚಾಲಕರ ಸಂಘದ ಮಾಜಿ ಅಧ್ಯಕ್ಷರು ಹಾಜರಿದ್ದರು.

‘ಮಾಜಿ ಶಾಸಕರಿಂದ ದ್ವೇಷ ರಾಜಕಾರಣ’

ರಾಜಕೀಯ ಎಂದ ಕೂಡಲೇ ಪರ-ವಿರೋಧ ಎಂಬುದು ಇದ್ದೇ ಇರುತ್ತದೆ. ಆದರೆ ಮಾಜಿ ಶಾಸಕ ಡಿ.ಎನ್ ಜೀವರಾಜ್ ಅವರಷ್ಟು ದ್ವೇಷ ರಾಜಕಾರಣ ರಾಜ್ಯದ ಯಾವ ಮಾಜಿ ಶಾಸಕರು ಮತ್ತು ಶಾಸಕರು ಮಾಡುತ್ತಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ದೂರಿದರು. ಚುನಾವಣೆ ಬಳಿಕ ನನ್ನ ಆಸ್ತಿ ಕಡಿಮೆಯಾಗಿದೆ ಹೊರತು ಹೆಚ್ಚಾಗಿಲ್ಲ. ಸತ್ಯ ನ್ಯಾಯ ನಿಷ್ಠೆಯಿಂದ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಲೋಕಯುಕ್ತ ಮತ್ತು ಇತರೆ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಕ್ಕಿದೆ. ಈ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನೀಡಿರುವ ದೂರಿಗೆ ನಾನು ತಡೆಯಾಜ್ಞೆ ತರಬಹುದಿತ್ತು. ಆದರೆ ನನ್ನ ಅಧಿಕಾರವನ್ನು ನಾನು ದುರುಪಯೋಗ ಪಡಿಸಿಕೊಂಡಿಲ್ಲ. ಎಲ್ಲಾ ತನಿಖೆಗೂ ಸಿದ್ಧನಿದ್ದೇನೆ. ತನಿಖೆಯಿಂದ ಸತ್ಯ ಹೊರ ಬರಲಿ. 2014ರಲ್ಲಿ ಒತ್ತುವರಿ ಸಮಸ್ಯೆ ನಿವಾರಿಸಲು ಮಾಜಿ ಶಾಸಕರ ಅಧಿಕಾರದ ಅವಧಿಯಲ್ಲಿ ಸರ್ಕಾರ ಟಾಸ್ಕ್ ಪೋರ್ಸ್ ರಚನೆಯಾಗಿತ್ತು. ಆದರೆ ಅದನ್ನು ಮಾಜಿ ಶಾಸಕರು ಅನುಷ್ಠಾನಕ್ಕೆ ತಂದಿಲ್ಲ. ಪ್ರಸ್ತುತ ಟಾಸ್ಕ್‌ಪೋರ್ಸ್ ಸಮಿತಿ ರಚನೆಯಾಗಿದೆ. ಒತ್ತುವರಿ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.