ಶೃಂಗೇರಿ: ನಗರದ ಸ್ವಾಗತ ಮಂಟಪದ ಸಮೀಪ ರಾಷ್ಟ್ರೀಯ ಹೆದ್ದಾರಿಯ ವೃತ್ತದಲ್ಲಿ ಶಂಕರಾಚಾರ್ಯರ ಮೂರ್ತಿ ಸ್ಥಾಪನೆ ವಿಚಾರ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಶೃಂಗೇರಿ, ಕೊಪ್ಪ, ಜಯಪುರ ಮತ್ತು ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮಧ್ಯದಲ್ಲಿರುವ ವೃತ್ತದಲ್ಲಿ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗೆ ಒಂದು ಗುಂಪು ಮುಂದಾಗಿದೆ. ಇದೇ ವೃತ್ತಕ್ಕೆ ಕ್ಷೇತ್ರದ ಮೊದಲ ಶಾಸಕ ಕೆ.ಎನ್.ವೀರಪ್ಪಗೌಡ ವೃತ್ತ ಎಂದು 50 ವರ್ಷಗಳ ಹಿಂದೆ ನಾಮಕರಣ ಮಾಡಲಾಗಿದ್ದು, ಹಾಗಾಗಿ ವೀರಪ್ಪಗೌಡ ಅವರ ಹೆಸರೇ ಮುಂದುವರಿಸಬೇಕು ಎಂದು ವೀರಪ್ಪಗೌಡ ಅಭಿಮಾನಿ ಬಳಗ ಒತ್ತಾಯಿಸಿದೆ. ಎರಡು ಗುಂಪುಗಳ ನಡುವೆ ವಾದ, ಚರ್ಚೆ, ಹೋರಾಟದ ಮಾತುಗಳು ಕೇಳಿಬರಲಾರಂಭಿಸಿದೆ.
ಆಗುಂಬೆ, ಜಯಪುರ, ಕೊಪ್ಪ ಮಾರ್ಗದಿಂದ ಶೃಂಗೇರಿಗೆ ಪ್ರವೇಶಿಸುವ ವೃತ್ತವನ್ನು 50 ವರ್ಷಗಳಿಂದ ವೀರಪ್ಪಗೌಡ ವೃತ್ತ ಎಂದು ಕರೆಯಲಾಗುತ್ತಿತ್ತು. 2010ರಲ್ಲಿ ಹೆದ್ದಾರಿ ವಿಸ್ತರಣೆಯಾದ ಬಳಿಕ ಜಯಪುರ ಕಡೆ ಹೋಗುವ ರಸ್ತೆಯಲ್ಲಿ ಯಾರೊ ರಾತ್ರೋರಾತ್ರಿ ಪುಟ್ಟದಾದ ಶಂಕರಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಿದ ಇದನ್ನು ‘ಶಂಕರಾಚಾರ್ಯರ ವೃತ್ತ’ ಎಂದು ಕರೆಯಲಾರಂಭಿಸಿದರು.
ವೀರಪ್ಪಗೌಡ ವೃತ್ತ ಎಂದಿದ್ದ ನಾಮಫಲಕವನ್ನು ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ವೇಳೆ ತೆಗೆಯಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಈಗ ವೃತ್ತದಲ್ಲಿ ಶಂಕರಾಚಾರ್ಯರ ಮೂರ್ತಿಯನ್ನು ಖಾಸಗಿ ವ್ಯಕ್ತಿಗಳು ಸ್ಥಾಪಿಸುತ್ತಿದ್ದಾರೆ. ಈ ನಡುವೆ ವೀರಪ್ಪಗೌಡ ವೃತ್ತ ಎಂಬ ನಾಮಫಲಕವನ್ನು ನಾಲ್ಕು ಕಡೆ ವೀರಪ್ಪಗೌಡರ ಅಭಿಮಾನಿಗಳು ಹಾಕಿದ್ದಾರೆ. ಖಾಸಗಿ ವ್ಯಕ್ತಿಗಳು ಶಂಕರಾಚಾರ್ಯರ ಮೂರ್ತಿ ಮತ್ತು ಕಾಲೇಜಿನ ಲಾಂಛನ ಪ್ರತಿಷ್ಠಾಪಿಸಲು ವೀರಪ್ಪಗೌಡ ಅಭಿಮಾನಿ ಬಳಗ ವಿರೋಧ ವ್ಯಕ್ತಪಡಿಸಿದೆ.
‘ಶಂಕರಾಚಾರ್ಯರ ಮೂರ್ತಿಯನ್ನು ಗುಡಿ ಕಟ್ಟಿ ಪೂಜಿಸಬೇಕೆ ಹೊರತು, ಈ ರೀತಿ ರಸ್ತೆಯ ಮಧ್ಯದಲ್ಲಿ ಸ್ಥಾಪಿಸಬಾರದು. ಇಗಾಗಲೇ ಶಂಕರಾಚಾರ್ಯರ 52 ಅಡಿಯ ಮೂರ್ತಿಯನ್ನು ವೃತ್ತದ ಸಮೀಪ ಮಾರುತಿ ಬೆಟ್ಟದಲ್ಲಿ ಸ್ಥಾಪಿಸಿ ಪೂಜಿಸುತ್ತಿದ್ದಾರೆ. ಈ ವೃತ್ತದಲ್ಲಿ ಶಂಕರಾಚಾರ್ಯರ ಮೂರ್ತಿ ಸ್ಥಾಪಿಸುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ ಸಂದೇಶ್ ಹೆಗ್ಡೆ ಹೇಳಿದರು.
‘ಶೃಂಗೇರಿಯ ಸ್ವಾಗತ ಮಂಟಪದ ಸಮೀಪ ಇರುವ ವೃತ್ತಕ್ಕೆ 50 ವರ್ಷಗಳಿಂದ ಕೆ.ಎನ್.ವೀರಪ್ಪಗೌಡ ವೃತ್ತ ಎಂದು ಕರೆಯಲಾಗುತ್ತಿದೆ. ಈ ನಡುವೆ ಇತ್ತೀಚಿನ ವರ್ಷದಲ್ಲಿ ರಾತ್ರೋರಾತ್ರಿ ಈ ವೃತ್ತಕ್ಕೆ ಶಂಕರಾಚಾರ್ಯರ ಚಿಕ್ಕ ಪ್ರತಿಮೆಯನ್ನು ಒಂದು ಗುಂಪು ತಂದಿಟ್ಟಿದೆ’ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಹೇಳಿದರು.
ವೀರಪ್ಪಗೌಡ ವೃತ್ತದಲ್ಲಿ ಜಂಕ್ಷನ್ ನಿರ್ಮಿಸುವ ಉದ್ದೇಶ ಕ್ರೀಯಾ ಯೋಜನೆಯಲ್ಲಿದೆ. ಅನುಮತಿ ಪಡೆಯದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲಾಗಿದೆಮಂಜುನಾಥ್ ನಾಯ್ಕ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
6800 ಗೇಣಿದಾರರನ್ನು ಭೂ ಮಾಲೀಕರನ್ನಾಗಿ ಮಾಡಿದ ಕೆ.ಎನ್.ವೀರಪ್ಪಗೌಡರ ಹೆಸರು ವೃತ್ತದಲ್ಲಿದೆ. ಆದರಿಂದ ಇಲ್ಲಿ ಯಾವುದೇ ಪ್ರತಿಮೆ ನಿರ್ಮಿಸುವುದು ಬೇಡ. ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವು ಮಾಡಿಕಲ್ಕುಳಿ ವಿಠಲ ಹೆಗ್ಡೆ ಪರಿಸರ ಹೋರಾಟಗಾರ
ವೀರಪ್ಪಗೌಡ ವೃತ್ತದಲ್ಲಿ ಜಂಕ್ಷನ್ ನಿರ್ಮಿಸುವ ಉದ್ದೇಶ ಕ್ರಿಯಾ ಯೋಜನೆಯಲ್ಲಿದೆ. ಅನುಮತಿ ಪಡೆಯದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲಾಗಿದೆಮಂಜುನಾಥ್ ನಾಯ್ಕ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಶೃಂಗೇರಿ ಕೊಪ್ಪ ಜಯಪುರ ಮತ್ತು ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮಧ್ಯದಲ್ಲಿರುವ ವೃತ್ತದಲ್ಲಿ ಸದ್ಯ ಅಪಘಾತದ ವಲಯವಾಗಿ ಮಾರ್ಪಟ್ಟಿದೆ. ಈ ವೃತ್ತದ ಮಧ್ಯದಲ್ಲಿ ಆರಂಭಿಸಿದ್ದ ಸ್ತಂಭ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಆಗುಂಬೆ ಕಡೆಯಿಂದ ಬರುವ ರಾಜ್ಯ ಹೆದ್ದಾರಿ ಜಯಪುರ ಕಡೆಯಿಂದ ಬರುವ ಹೆದ್ದಾರಿ ಶಿವಮೊಗ್ಗ-ಮಂಗಳೂರು ಕಡೆಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಪ್ರತಿಮೆ ನಿರ್ಮಿಸಲು ಕಲ್ಲು ಕಟ್ಟಡ ಕಟ್ಟಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ವೃತ್ತದ ಬಳಿ ಒಂದು ಕಡೆ ನರ್ಸಿಂಗ್ ಶಾಲೆಯಿದ್ದು ಮತ್ತೊಂದು ಕಡೆ ಖಾಸಗಿ ವಸತಿಗೃಹ ಆದಿಚುಂಚನಗಿರಿ ಮಠಕ್ಕೆ ಹೋಗುವ ಪ್ರವೇಶ ದ್ವಾರವಿದೆ. ಮತ್ತೊಂದೆಡೆ ಪ್ರವಾಸಿ ಕೇಂದ್ರದ ಸಮುಚ್ಚಯ ಜಲಮಾಪನ ಕೇಂದ್ರ ಇರುವುದರಿಂದ ನಾಲ್ಕು ದಿಕ್ಕುಗಳಲ್ಲಿ ಬರುವ ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ. ವೃತ್ತವನ್ನು ಇನ್ನಷ್ಟು ಅಗಲ ಮಾಡಿ ಸಿಗ್ನಲ್ ಅಳವಡಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯವಾಗಿದೆ.