
ಶೃಂಗೇರಿ ಶಾರದಾ ಪೀಠದಲ್ಲಿ ಬುಧವಾರ ಮಠದ ಗುರುಗಳಾದ ವಿಧುಶೇಖರಭಾರತೀ ಶ್ರೀಗಳ ನೇತೃತ್ವದಲ್ಲಿ ಶಾರದಾಂಬೆ ಮಹಾರಥೋತ್ಸವ ನಡೆಯಿತು
ಶೃಂಗೇರಿ: ಇಲ್ಲಿನ ಶಾರದಾ ಪೀಠದ ಶಾರದಾಂಬಾ ಮಹಾರಥೋತ್ಸವವು ಬುಧವಾರ ವಿಜೃಂಭಣೆಯಿಂದ ಮಠದ ಗುರುಗಳಾದ ವಿಧುಶೇಖರಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಬೆಳಿಗ್ಗೆ ಶಾರದಾ ಮಠಕ್ಕೆ ಬಂದರು. ಮಠದ ಹೊರ ಪ್ರಾಂಗಣದ ಮತ್ತು ಒಳ ಪ್ರಾಂಗಣದ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಶಾರದಾಂಬೆಯ ಉತ್ಸವ ಮೂರ್ತಿಯನ್ನು ಶಾರದಾ ಪೀಠದಿಂದ ವಾದ್ಯಮೇಳದೊಂದಿಗೆ ರಥಕ್ಕೆ ತರಲಾಯಿತು. ಉತ್ಸವ ಮೂರ್ತಿಯನ್ನು ರಥಕ್ಕೆ ಮೂರು ಪ್ರದಕ್ಷಿಣೆ ಹಾಕಲಾಯಿತು. ನಂತರ, ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಥ ಎಳೆಯುವ ಮೊದಲು ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ಎದುರು ಆನೆ, ಅಶ್ವ, ತಟ್ಟಿರಾಯ, ಸ್ತಬ್ಧಚಿತ್ರ, ಭಜನಾ ತಂಡಗಳು ಉತ್ಸವದ ಮೆರಗು ಹೆಚ್ಚಿಸಿತು. ರಥ ಸಾಗುವ ದಾರಿಯಲ್ಲಿ ರಂಗೋಲಿ ಚಿತ್ತಾರ ಹಾಕಲಾಗಿತ್ತು ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಠದ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷ, ಭಕ್ತಾದಿಗಳ ಜಯಘೋಷದೊಂದಿಗೆ ರಥವನ್ನು ಎಳೆಯಲಾಯಿತು.
ಭಾರತೀ ಚೌಕದಲ್ಲಿರುವ ಕಟ್ಟೆಬಾಗಿಲಿನ ಗಣಪತಿಗೆ ಪೂಜೆ ಸಲ್ಲಿಸಿದರು. ರಥೋತ್ಸವದ ಎದುರು ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಕಾಲ್ನಡಿಗೆಯಲ್ಲಿ ಸಾಗಿದರು. ಮಠದ ಆಡಳಿತಾಧಿಕಾರಿ ಪಿ.ಎ ಮುರಳಿ ಮತ್ತು ಭಕ್ತಾದಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.