
ಶೃಂಗೇರಿ (ಚಿಕ್ಕಮಗಳೂರು): ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕೆರೆಕಟ್ಟೆ ಗ್ರಾಮದ ಕೆರೆಗದ್ದೆಯಲ್ಲಿ ಇಬ್ಬರು ರೈತರನ್ನು ಕೊಂದು ಹಾಕಿದ, ಈ ಭಾಗದಲ್ಲಿ ಹಲವು ದಿನಗಳಿಂದ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಭಾನುವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಯಿತು.
ಸೋಮವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲು ದುಬಾರೆ ಆನೆ ಶಿಬಿರ ಹಾಗೂ ಹಾರಂಗಿ ಆನೆ ಶಿಬಿರಗಳಿಂದ ಪ್ರಶಾಂತ, ಧನಂಜಯ, ಅಯಜಯ, ಹರ್ಷ, ಏಕಲವ್ಯ ಹೆಸರಿನ 5 ಕುಮ್ಕಿ ಆನೆಗಳನ್ನು ಭಾನುವಾರ ಬೆಳಿಗ್ಗೆ ಕೆರೆಕಟ್ಟೆಗೆ ಕರೆತರಲಾಯಿತು.
ಕಾಡಾನೆಯ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಅದು ಸುತ್ತಮುತ್ತಲ ಪ್ರದೇಶಗಳಲ್ಲಿ ಬೀಡು ಬಿಟ್ಟು ಶೀರ್ಲು ಬಳಿ ರೈತರ ಜಮೀನಿನ ಮೇಲೆ ದಾಳಿ ಮಾಡಿ ಬೇಲಿ, ತೋಟ ನಾಶಗೊಳಿಸಿತ್ತು. ಭಾನುವಾರ ಬೆಳಿಗ್ಗೆ ಕುದುರೆಮುಖದ ಭಗವತಿಯ ಅರಣ್ಯದಲ್ಲಿ ಆನೆ ಇರುವುದು ಖಚಿತವಾಯಿತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ಸಂಜೆ ವೇಳೆ ಶಿಬಿರದ ಆನೆಗಳನ್ನು ಭಗವತಿಗೆ ಸ್ಥಳಾಂತರಿಸಿದರು.
ಆನೆ ಬೀಡುಬಿಟ್ಟಿರುವ ಸ್ಥಳವನ್ನು ಪತ್ತೆ ಮಾಡಲು ಕುಶಾಲನಗರದ ಅರಿವಳಿಗೆ ತಜ್ಞ ವೈದ್ಯ ಡಾ.ಮುಜೀಬ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ವಲಯ ಅರಣ್ಯಾಧಿಕಾರಿ ಅನಿಲ್, ಸತೀಶ್ ಮತ್ತು ದಿನೇಶ್, ಶಾರ್ಪ್‌ಶೂಟರ್ ಅಕ್ರಮ್ ನೇತೃತ್ವದ ತಂಡ ತೆರಳಿತ್ತು.
ಮಧ್ಯಾಹ್ನ 3 ಗಂಟೆಯ ವೇಳೆಗೆ ಭಗವತಿ ಭಾಗದ ಅರಣ್ಯ ಪ್ರದೇಶದಲ್ಲಿ ಆನೆ ಇರುವ ಸ್ಥಳವನ್ನು ತಂಡ ಪತ್ತೆ ಮಾಡಿತು. ಆನೆಗೆ ಅರಿವಳಿಕೆ ಔಷಧಿಯನ್ನು ಬಂದೂಕಿನ ಮೂಲಕ ನೀಡಲಾಯಿತು. ಪ್ರಜ್ಞೆ ತಪ್ಪಿದ್ದ ಒಂಟಿ ಸಲಗಕ್ಕೆ ಸರಪಳಿ ಬಿಗಿದು ರಾತ್ರಿ 11 ಗಂಟೆ ವೇಳೆಗೆ ಅರಣ್ಯದಿಂದ ಗ್ರಾಮದ ವ್ಯಾಪ್ತಿಗೆ ತರಲಾಯಿತು.
ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟು ಎರಡು ದಿನ ಕಳೆದರೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಇದ್ದುದರಿಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಆಗಾಗ ಭೇಟಿ ನೀಡುತ್ತಿದ್ದರು. ಘಟನೆ ದಿನ ಈ ವ್ಯಕ್ತವಾದ ಆಕ್ರೋಶದಿಂದ ಸರ್ಕಾರವು ಆನೆ ಸೆರೆ ಹಿಡಿಯಲು ಆದೇಶ ಮಾಡಿತ್ತು.
ಎರಡು ವರ್ಷಗಳಿಂದ ಕೆರೆ ಪಂಚಾಯಿತಿ ಮುಡುಬ, ತಲ್ಲಾರ್, ಕಲ್ಚಾರ್, ಕೆರೆಗದ್ದೆ, ಗಣಪತಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿದ್ದವು. ಕೆರೆಕಟ್ಟೆ, ಗಣಪತಿಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಕಾಣಿಸುತ್ತಿದ್ದವು.
‘ಒಂದು ಕಾಡಾನೆ ಸೆರೆ ಹಿಡಿಯಲು ಸುಮಾರು ₹ 50 ಲಕ್ಷದವರೆಗೆ ವೆಚ್ಚ ತಗುಲುತ್ತದೆ. ಇದನ್ನು ಲೆಕ್ಕಿಸದೆ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅರಣ್ಯ ಸಚಿವರ ಮೇಲೆ ಒತ್ತಡ ತಂದು ಕಾಡಾನೆ ಸೆರೆ ಹಿಡಿಯಲಾಗಿದೆ. ಕ್ಷೇತ್ರದಲ್ಲಿ ಕಾಡಾನೆ ದಾಳಿಯಿಂದ ಈಗಾಗಲೇ 7 ಜನರು ಮೃತಪಟ್ಟಿದ್ದಾರೆ. ಒಟ್ಟು 5 ಆನೆಗಳನ್ನು ಸೆರೆಹಿಡಿಯಲಾಗಿದೆ. ಇಲ್ಲಿ ಸೆರೆ ಹಿಡಿದ ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ಬಿಡಲಾಗುವುದು’ ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.