ADVERTISEMENT

ಸಂತ ಜೋಸೆಫರ ಪ್ರೌಢಶಾಲೆ ವಜ್ರ ಮಹೋತ್ಸವ: ನೆನಪು ಶಾಶ್ವತವಾಗಿಸಲು ಹಲವು ಕಾರ್ಯಕ್ರಮ

ರವಿಕುಮಾರ್ ಶೆಟ್ಟಿಹಡ್ಲು
Published 5 ಡಿಸೆಂಬರ್ 2025, 5:42 IST
Last Updated 5 ಡಿಸೆಂಬರ್ 2025, 5:42 IST
ಕೊಪ್ಪದ ಸಂತ ಜೋಸೆಫರ ಶಾಲೆ ವಜ್ರ ಮಹೋತ್ಸವದ ಹಿಂದಿನ ದಿನ ಬಂದ ನೂತನ ಶಾಲಾ ಬಸ್ ಅನ್ನು ಬರ ಮಾಡಿಕೊಳ್ಳಲಾಯಿತು
ಕೊಪ್ಪದ ಸಂತ ಜೋಸೆಫರ ಶಾಲೆ ವಜ್ರ ಮಹೋತ್ಸವದ ಹಿಂದಿನ ದಿನ ಬಂದ ನೂತನ ಶಾಲಾ ಬಸ್ ಅನ್ನು ಬರ ಮಾಡಿಕೊಳ್ಳಲಾಯಿತು   

ಕೊಪ್ಪ: ಮಲೆನಾಡು ಭಾಗದ ಕೊಪ್ಪದಲ್ಲಿ 1965ರ ಸಂದರ್ಭದಲ್ಲಿ ಆರಂಭಗೊಂಡು ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ಶೈಕ್ಷಣಿಕ ತಳಹದಿ ಹಾಕಿಕೊಟ್ಟ ಸಂತ ಜೋಸೆಫರ ಪ್ರೌಢಶಾಲೆಯು ಶುಕ್ರವಾರ (ಡಿ.5)ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಹೆಣ್ಣು ಮಕ್ಕಳ ಜೀವನ ಸುಧಾರಣೆಗೆ ದಾರಿ ದೀಪವಾಗಿ ಉದಾತ್ತ ಚಿಂತನೆಯೊಂದಿಗೆ ಉದಯಿಸಿದ ಶಾಲೆಯು ಆರು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಆಧುನಿಕ ಸವಲತ್ತುಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ. 

ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸಮಾಜದ ಉನ್ನತ ಸ್ಥಾನಕ್ಕೇರಿ ಬದುಕು ಕಟ್ಟಿಕೊಂಡು ಹೆತ್ತ ಮನೆ, ಓದಿದ ಶಾಲೆ, ಹುಟ್ಟಿದ ಊರು ಮಾತ್ರವಲ್ಲದೇ ರಾಜ್ಯ, ದೇಶಕ್ಕೂ ಕೀರ್ತಿ ತಂದಿದ್ದಾರೆ. 1985ರ ವರೆಗೆ ಹೆಣ್ಣು ಮಕ್ಕಳಿಗೆ ಸೀಮಿತಗೊಂಡಿದ್ದ ಶಾಲೆ ಬಡವ ಬಲ್ಲಿದ ಭೇದವಿಲ್ಲದೆ, ಜಾತಿ ಮತ ತಾರತಮ್ಯವಿಲ್ಲದೆ ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವ ದಿಕ್ಕಿನಲ್ಲಿ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆ ಹೊಂದಿದೆ.

ADVERTISEMENT

ಮಂಗಳೂರು ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಸಂತ ಜೋಸೆಫರ ಪ್ರೌಢಶಾಲೆ ವಜ್ರ ಮಹೋತ್ಸವ ಆಚರಣೆ ಸಮಿತಿಗೆ ಅಧ್ಯಕ್ಷರಾಗಿ ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ.ಗೋವಿಂದೆಗೌಡ ಅವರ ಪುತ್ರ ಎಚ್.ಜಿ.ವೆಂಕಟೇಶ್ ನೇತೃತ್ವ ವಹಿಸಿದ್ದಾರೆ. ಸಂಚಾಲಕರಾಗಿ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಎಲ್.ದೀಪಕ್ ಕುದುರೆಗುಂಡಿ, ಮುಖ್ಯ ಶಿಕ್ಷಕಿ ಸಿ.ಅನಿತಾ ಶಾಂತಿ ಮಿನೆಜಸ್, ಎಲ್.ಎಂ.ಪ್ರಕಾಶ್ ಕೌರಿ ಮತ್ತಿತರರು ಇದ್ದಾರೆ.

ಮಾದರಿ ಕಾರ್ಯಕ್ರಮವಾಗಿಸಲು ಪ್ರಯತ್ನ 

ಈ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕಚೇರಿ ಇರುವುದು ತಾಲ್ಲೂಕಿನಲ್ಲಿ ವಿಶೇಷವಾಗಿದೆ. ವಜ್ರ ಮಹೋತ್ಸವ ಸಂಭ್ರಮದ ಪ್ರಯುಕ್ತ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ಶೃಂಗೇರಿ ಎನ್.ಆರ್.ಪುರ ತಾಲ್ಲೂಕಿನ ಎಲ್ಲಾ ಸರ್ಕಾರಿ ಖಾಸಗಿ ವಸತಿ ಶಾಲಾ ಶಿಕ್ಷಕರು ನಿಲಯ ಪಾಲಕರಿಗಾಗಿ 'ಚೈಲ್ಡ್ ಸೇಫ್ಟಿ ಪಾಲಿಸಿ' ಕುರಿತು ಒಂದು ದಿನ ಕಾರ್ಯಾಗಾರ ನಡೆಸಿ ಮೆಚ್ಚುಗೆ ಗಳಿಸಿದೆ. ಗ್ರಾಮಾಂತರ ಪ್ರದೇಶದಿಂದ ಬರುವ ಮಕ್ಕಳಿಗಾಗಿ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸುವುದು ಎಲ್ಲಾ ಬಗೆಯ ಶೈಕ್ಷಣಿಕ ಸಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸಲು ಅನುಕೂಲವಾಗುವಂತಹ ಸುಸಜ್ಜಿತ ಒಳಾಂಗಣ ರಂಗ ಮಂದಿರ ನಿರ್ಮಾಣ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಾಣ ಪ್ರತಿಭಾವಂತ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸುವ ಪ್ರಮುಖ ನಿರ್ಧಾರ ಕೈಗೊಂಡು ವಜ್ರ ಮಹೋತ್ಸವದಲ್ಲಿ ಜಾರಿಗೆ ತರಲು ಸಮಿತಿ ಉದ್ದೇಶಿಸಿದೆ.    

ಇಂದಿನ ಕಾರ್ಯಕ್ರಮಗಳು

ಬೆಳಿಗ್ಗೆ 10 ಗಂಟೆಗೆ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಲಿದೆ. ಸಂಜೆ 5ಗಂಟೆಗೆ ಅರಳಿಕಟ್ಟೆಯಿಂದ ಗಣ್ಯರ ಸ್ವಾಗತದೊಂದಿಗೆ ಆಪ್ತ ಮೆರವಣಿಗೆ ನಡೆಯಲಿದೆ. 5.30ಕ್ಕೆ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮಂಗಳೂರಿನ ಅರ್ಸುಲೈನ್ ಪ್ರಾನ್ಸಿಸ್ಕನ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಭಗಿನಿ ಫಿಲೋಮಿನ ನೊರೊನ್ಹ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಅವರು ಬಯಲು ರಂಗ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಮೆಲ್ವಿನ್ ಟೆಲ್ಲಿಸ್ ಆಶೀರ್ವಚನ ನೀಡಲಿದ್ದಾರೆ. ಸಾಹಿತಿ ನರೇಂದ್ರ ರೈ ದೇರ್ಲ ಅವರಿಂದ ಪ್ರಧಾನ ಉಪನ್ಯಾಸವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.