ADVERTISEMENT

ಆಲ್ದೂರು | ಒಣಗಿ ನಿಂತ ಮರ; ಸವಾರರಿಗೆ ಸಂಕಷ್ಟ

ಹೆದ್ದಾರಿ ಬದಿಯಲ್ಲಿ ಒಣಗಿ ನಿಂತ ಬೃಹತ್ ಮರಗಳು; ಪ್ರಾಣಾಪಾಯದ ಆತಂಕ

ಜೋಸೆಫ್ ಎಂ.ಆಲ್ದೂರು
Published 19 ಆಗಸ್ಟ್ 2025, 3:01 IST
Last Updated 19 ಆಗಸ್ಟ್ 2025, 3:01 IST
ತೋರಣ ಮಾವು ಆಲ್ದೂರುಪುರ ಗ್ರಾಮದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ 27ರ ತಿರುವಿನಲ್ಲಿ ಒಣಗಿ ನಿಂತಿರುವ ಬೃಹತ್ ಗಾತ್ರದ ಮರ
ತೋರಣ ಮಾವು ಆಲ್ದೂರುಪುರ ಗ್ರಾಮದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ 27ರ ತಿರುವಿನಲ್ಲಿ ಒಣಗಿ ನಿಂತಿರುವ ಬೃಹತ್ ಗಾತ್ರದ ಮರ   

ಆಲ್ದೂರು: ಚಿಕ್ಕಮಗಳೂರಿನಿಂದ ಆಲ್ದೂರು ಮಾರ್ಗವಾಗಿ ಶೃಂಗೇರಿ, ಎನ್.ಆರ್.ಪುರ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 27ರ ರಸ್ತೆ ಬದಿಯಲ್ಲಿ ಕೆಲವೆಡೆ ಕಾಡು ಜಾತಿಯ ಮರಗಳು ಸಂಪೂರ್ಣ ಒಣಗಿದ್ದು, ಅವುಗಳ ತೆರವಿಗೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದೆ.

ಆಲ್ದೂರು ಸಮೀಪದ ತೋರಣ ಮಾವು ತಿರುವಿನಲ್ಲಿ ಅಕೇಶಿಯ ಮತ್ತು ಬೃಹತ್ ಕಾಡು ಜಾತಿಯ ಮರ ಒಣಗಿ ನಿಂತಿದ್ದು, ಬನ್ನೂರು ಗ್ರಾಮದ ಸೇತುವೆಯ ಪಕ್ಕದಲ್ಲಿ ಕೂಡ ಒಂದು ಮರ ಒಣಗಿ ನಿಂತಿದೆ.  ಸವಾರರ ಪ್ರಾಣಕ್ಕೆ ಕುತ್ತು ಬರುವ ಮುನ್ನ ತೆರವುಗೊಳಿಸಬೇಕು ಎಂದು ವಾಹನ ಸವಾರರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಬಾಳೆಹೊನ್ನೂರಿನಲ್ಲಿ ದ್ವಿಚಕ್ರ ವಾಹನ ಸವಾರರ ಮೇಲೆ ಮರದ ಕೊಂಬೆ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮಳೆಗಾಲ ಆಗಿರುವುದರಿಂದ ಹಗಲಿನಲ್ಲಾದರೂ ಸ್ವಲ್ಪವಾದರೂ ತಪ್ಪಿಸಿಕೊಳ್ಳುವ ಅವಕಾಶದ ಸಾಧ್ಯತೆಗಳಿದ್ದು ರಾತ್ರಿ ಹೊತ್ತು ಮರ ಮತ್ತು ಕೊಂಬೆ ಸಂಚರಿಸುವ ವಾಹನ ಮತ್ತು ಸವಾರರ ಮೇಲೆ ಬಿದ್ದರೆ ಜೀವ ಹಾನಿ ತಪ್ಪಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಒಣಗಿದ ಮರ ತೆರವಿಗೆ ಕ್ರಮ ವಹಿಸಬೇಕು ಎನ್ನುತ್ತಾರೆ ತೋರಣ ಮಾವು ರಾಜೀವ್.

ADVERTISEMENT

ಕಾಡು ಜಾತಿಯ ಮರಗಳನ್ನು ಅರಣ್ಯ ಇಲಾಖೆಯವರು ತೆರವುಗೊಳಿಸುತ್ತಾರೆ. ಆದರೆ ರಸ್ತೆ ಬದಿಯಲ್ಲಿ ಇರುವ ಕಾಫಿ ತೋಟಗಳ ಮಾಲೀಕರು ಮಳೆಗಾಲ ಆರಂಭಕ್ಕೂ ಮುನ್ನ ತಮ್ಮ ತೋಟದಿಂದ ರಸ್ತೆಗೆ ಚಾಚಿಕೊಂಡಿರುವ ಮರಗ ಮತ್ತು ಕೊಂಬೆಗಳನ್ನು ಕತ್ತರಿಸಿದರೆ ರಸ್ತೆ ಬದಿ ಇರುವ ವಿದ್ಯುತ್ ಸಂಪರ್ಕ ತಂತಿ ಮತ್ತು ಕಂಬಗಳು ಉಳಿಯುತ್ತವೆ. ವಾಹನ ಸವಾರರು ಇನ್ನಷ್ಟು ನಿರಾಳವಾಗಿ ಸಂಚರಿಸಬಹುದು ಎಂದು ಅರವಿಂದ್ ಬಿ.ಪಿ ಹೇಳಿದರು.

‘ಗಾಳಿ ಮಳೆಯ ರಭಸಕ್ಕೆ ರಸ್ತೆಗೆ ಉರುಳಿ ಬೀಳುವ ಮರದ ಕೊಂಬೆಗಳನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ತೆರವುಗೊಳಿಸುತ್ತದೆ. ಆದರೆ ಸಂಪೂರ್ಣ ಒಣಗಿ ನಿಂತಿರುವ ಕಾಡು ಜಾತಿಯ ಮರಗಳ ತೆರವಿನ ಹೊಣೆ ಅರಣ್ಯ ಇಲಾಖೆಗೆ ವ್ಯಾಪ್ತಿಗೆ ಬರುತ್ತದೆ. ಮಳೆಗಾಲಕ್ಕೂ ಮುಂಚಿತವಾಗಿ ರಸ್ತೆ ಬದಿಯಲ್ಲಿ ಅಪಾಯ ಮತ್ತು ಸಂಪೂರ್ಣ ಒಣಗಿದ ಕಾಡು ಜಾತಿಯ ಮರಗಳನ್ನು ಅರಣ್ಯ ಇಲಾಖೆ ತೆರವು ಮಾಡಬೇಕು’ ಎಂದು ಆಲ್ದೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಕೆ.ಎಲ್.ಕುಮಾರ್ ಹೇಳಿದರು.

ತೋರಣ ಮಾವು ಆಲ್ದೂರುಪುರ ಗ್ರಾಮದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ 27 ರಸ್ತೆ ಬದಿಯ ತಿರುವಿನಲ್ಲಿ ಒಣಗಿ ನಿಂತಿರುವ ಬೃಹತ್ ಗಾತ್ರದ ಮರ
ಮಳೆಗಾಲದಲ್ಲಿ ವಿದ್ಯುತ್ ತಂತಿ ತುಂಡಾಗದಂತೆ ಮುಂಜಾಗ್ರತಾ ಕ್ರಮವಾಗಿ ಅಡ್ಡಲಾಗಿ ಬಂದಿರುವ ಸಣ್ಣ–ಪುಟ್ಟ ಕೊಂಬೆಗಳನ್ನು ಮಾತ್ರ ತೆರವುಗೊಳಿಸಲು ಅವಕಾಶ ಮೆಸ್ಕಾಂಗೆ ಇದ್ದು ಸಂಪೂರ್ಣವಾಗಿ ಒಣಗಿರುವ ಕಾಡು ಜಾತಿಯ ಮರಗಳನ್ನು ಅರಣ್ಯ ಇಲಾಖೆಯವರೇ ತೆರವುಗೊಳಿಸಬೇಕು
ಕೆ.ಸತೀಶ್ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ರಸ್ತೆ ಬದಿಗಳಲ್ಲಿ ಅಪಾಯದ ಹಂತದಲ್ಲಿ ಇರುವ ಮರಗಳ ಮಾಹಿತಿಯನ್ನು ಸಾರ್ವಜನಿಕರು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿ ತೆರವುಗೊಳಿಸಲು ಸಹಕರಿಸಬೇಕು.ಈ ಕುರಿತು ಶೀಘ್ರ ಕ್ರಮ ಕೈಗೊಂಡು ರಸ್ತೆ ಬದಿ ಒಣಗಿದ ಮರಗಳನ್ನು ಕತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು
ರಮೇಶ್ ಬಾಬು ಚಿಕ್ಕಮಗಳೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.