ADVERTISEMENT

ಚಿಕ್ಕಮಗಳೂರು: ಐಡಿಎಸ್‌ಜಿ ಕಾಲೇಜಿನ ಕೆಲ ವಿದ್ಯಾರ್ಥಿಗಳಿಂದ  ಹಿಜಾಬ್‌ಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 16:16 IST
Last Updated 5 ಫೆಬ್ರುವರಿ 2022, 16:16 IST
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಶನಿವಾರ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದರು.
ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಶನಿವಾರ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದರು.    

ಚಿಕ್ಕಮಗಳೂರು: ಹಿಜಾಬ್‌ ಮತ್ತು ಕೇಸರಿ ಶಾಲು ತಿಕ್ಕಾಟ ನಗರದ ಐಡಿಎಸ್‌ಜಿ ಕಾಲೇಜಿಗೂ ವ್ಯಾಪಿಸಿದೆ. ಹಿಜಾಬ್‌ ಅವಕಾಶ ನೀಡಬಾರದು ಎಂದು ಕೆಲ ವಿದ್ಯಾರ್ಥಿಗಳು, ಹಿಜಾಬ್‌ಗೆ ನಿರ್ಬಂಧ ವಿಧಿಸಬಾರದು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಶನಿವಾರ ಮನವಿ ಸಲ್ಲಿಸಿದರು.

ಐಡಿಎಸ್‌ಜಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಕಾಲೇಜಿನ ಪಡಸಾಲೆ, ಆವರಣದಲ್ಲಿ ಗುಂಪಾಗಿ ಅಡ್ಡಾಡಿದರು. ಹಿಜಾಬ್‌ ಕೈಬಿಡುವವರೆಗೆ ಕೇಸರಿ ಶಲ್ಯ ತೆಗೆಯಲ್ಲ ಎಂದು ಪಟ್ಟುಹಿಡಿದರು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿದ್ದರು.

ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಗುಂಪು ಪ್ರಾಂಶುಪಾಲಗೆ ಮನವಿ ಸಲ್ಲಿಸಿತು. ಕಾಲೇಜಿನಲ್ಲಿ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರ ಮತ್ತು ಸಮಾನತೆ ಪಾಲಿಸಬೇಕು. ಹಿಜಾಬ್‌ ಧರಿಸುವುದಕ್ಕೆ ಅವಕಾಶ ನೀಡಬಾರದು ಮನವಿ ಮಾಡಿದರು.

ADVERTISEMENT

ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿತು. ಹಿಜಾಬ್‌ ಧರಿಸುವುದು ನಮ್ಮ ಹಕ್ಕು. ಪೂರ್ವಿಕರು ಧರಿಸುತ್ತಿದ್ದರು. ಅದರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಕೋರಿದರು. ಪೊಲೀಸರು ಸ್ಥಳದಲ್ಲಿ ಇದ್ದರು.

ಎರಡು ಕಡೆಯವರು ಮನವಿ ಕೊಟ್ಟಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ, ಕಾಲೇಜು ಅಭಿವೃದ್ಧಿ ಸಮಿತಿ, ಕಾಲೇಜಿನ ಬೋಧಕರು ಎಲ್ಲರೊಂದಿಗೆ ಚರ್ಚಿಸಿ ಒಂದು ನಿರ್ಧಾರ ಕೈಗೊಳ್ಳುವುದಾಗಿ ಅವರಿಗೆ ತಿಳಿಸಿದ್ದೇವೆ.

- ರಾಜಣ್ಣ, ಪ್ರಾಚಾರ್ಯ, ಐಡಿಎಸ್‌ಜಿ ಕಾಲೇಜು.

––––––
‘ಹಿಜಾಬ್‌ ತೆಗೆಯಲ್ಲ’

ಕಾಲೇಜಿಗೆ ಸೇರಿದಾಗಿನಿಂದಲೂ ಹಿಜಾಬ್‌ ಧರಿಸುತ್ತಿದ್ದೇವೆ. ಹಿಜಾಬ್‌ನಿಂದ ಈವರೆಗೆ ಯಾವುದೇ ತೊಂದರೆ ಆಗಿಲ್ಲ. ಅದು ಶಕ್ತಿ. ನಾವು ಹಿಜಾಬ್‌ ತೆಗೆಯಲ್ಲ.

ಬುಶ್ರಾ, ಇತರ ಮುಸ್ಲಿಂ ವಿದ್ಯಾರ್ಥಿನಿಯರು

––––
‘ಹಿಜಾಬ್‌ಗೆ ಅವಕಾಶ ನೀಡಬಾರದು’

ಹಿಜಾಬ್‌ ಧರಿಸಲು ಅವಕಾಶ ನೀಡಬಾರದು ಎಂದು ಕೆಲವರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗಿದ್ದೆವು. ಸಮವಸ್ತ್ರ, ಸಮಾನತೆ ಕಾಪಾಡಬೇಕು ಎಂಬುದು ನಮ್ಮ ಮನವಿ.

- ಶ್ರೀರಾಮ್‌ ಮತ್ತು ಇತರ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.