ADVERTISEMENT

ಕೆಂಡದಂತ ಬಿಸಿಲು | ಮಲೆನಾಡು, ಅರೆಮಲೆನಾಡಿನಲ್ಲೂ ಉಷ್ಣಾಂಶ ಹೆಚ್ಚಳ: ಜನ ಕಂಗಾಲು

ವಿಜಯಕುಮಾರ್ ಎಸ್.ಕೆ.
Published 8 ಏಪ್ರಿಲ್ 2024, 7:19 IST
Last Updated 8 ಏಪ್ರಿಲ್ 2024, 7:19 IST
ಬಿಸಿಲಿನ ತಾಪದಿಂದ ನಲುಗಿರುವ ಜನ ಎಳನೀರಿನ ಮೊರೆ ಹೋಗಿರುವುದು
ಬಿಸಿಲಿನ ತಾಪದಿಂದ ನಲುಗಿರುವ ಜನ ಎಳನೀರಿನ ಮೊರೆ ಹೋಗಿರುವುದು   

ಚಿಕ್ಕಮಗಳೂರು: ಮಳೆನಾಡು, ಗಿರಿಶಿಖರಗಳ ಸಾಲು, ಝರಿ–ತೊರೆಗಳ ತವರು ಎಂದೆಲ್ಲ ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.

ಇದೇ ಮೊದಲ ಬಾರಿಗೆ ಜಿಲ್ಲೆಯ ಸರಾಸರಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇತ್ತ ಅಜ್ಜಂಪುರ, ತರೀಕೆರೆ ಭಾಗದಲ್ಲಿ 39 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಮಲೆನಾಡು ಭಾಗದಲ್ಲೂ ತಾಪಮಾನ ಹೆಚ್ಚಾಗಿದ್ದು, ಜನ ಜೀವನ ಕಷ್ಟವಾಗಿದೆ.‌

ಬೆಳಿಗ್ಗೆ 8 ಗಂಟೆ ದಾಟಿದರೆ ಬಿರು ಬಿಸಿಲು ಆರಂಭವಾಗುತ್ತದೆ. ಮಧ್ಯಾಹ್ನ 12 ಗಂಟೆ ದಾಟಿದರೆ ನೆರಳಿನಿಂದ ಹೊರ ಬರುವುದೇ ಕಷ್ಟವಾದರೆ, ರಾತ್ರಿ ಮನೆಯೊಳಗೆ ಕೂರುವುದು ಇನ್ನೂ ಕಷ್ಟವಾಗಿದೆ. ಅ‌ಜ್ಜಂಪುರ, ಶಿವನಿ ಸುತ್ತಮುತ್ತ ಮಧ್ಯಾಹ್ನ ಬಿಸಿಗಾಳಿ ಕೂಡ ಜನರನ್ನು ನಿತ್ರಾಣವಾಗಿಸುತ್ತಿದೆ.

ADVERTISEMENT

1991ರಿಂದ ಈವರೆಗಿನ ಅಂಕಿ–ಅಂಶ ಗಮನಿಸಿದರೆ ಸಾಮಾನ್ಯವಾಗಿ ಬಿರು ಬಿಸಿಲು ಏಪ್ರಿಲ್‌ನಲ್ಲಿ ಹೆಚ್ಚಾಗುತ್ತದೆ. ಈ ಬಾರಿ ಮಾರ್ಚ್‌ನಲ್ಲೇ ಬಿಸಿಲು ಹೆಚ್ಚಾಗಿತ್ತು, ಏಪ್ರಿಲ್‌ನಲ್ಲಿ ಇನ್ನೂ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಇದೇ ಮೊದಲ ಬಾರಿಗೆ 98 ಡಿಗ್ರಿ ಸೆಲ್ಸಿಯಸ್ ದಾಟಿದೆ. ಜಿಲ್ಲೆಯ ಸರಾಸರಿ ತಾಪಮಾನ ಗರಿಷ್ಟ ಎಂದರೆ 2012ರ ಏಪ್ರಿಲ್ 8 ರಂದು 36.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ 38 ಡಿಗ್ರಿ ಸೆಲ್ಸಿಯಸ್ ದಾಟಿದೆ. 

ದೇಹ ತಂಪಾಗಿಸಿಕೊಳ್ಳಲು ಎಳನೀರು, ತಂಪು ಪಾನೀಯಕ್ಕೆ ಜನ ಮುಗಿ ಬಿದ್ದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ಆಟೊ ಚಾಲಕರು ನೀರುಣಿಸುವ ಕಾರ್ಯವನ್ನು ಮಾಡಿದ್ದಾರೆ.

ಪೂರಕ ಮಾಹಿತಿ: ಕೆ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು

ತರೀಕೆರೆ ಮಹಾತ್ಮ ಗಾಂಧಿ ವೃತ್ತದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ‘ದಿವ್ಯತ್ರಯ ಸೇವಾ ಸಂಸ್ಥೆ’ ಪ್ರಯಾಣಿಕರಿಗಾಗಿ ಮಾಡಿದೆ. ಮಡಕೆ ನೀರನ್ನು ಕುಡಿದು ದಣಿವಾರಿಸಿಕೊಳ್ಳುತ್ತಿರುವ ಮಹಿಳೆ.
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿನ ಶಂಕರಮಠ ಅರಳಿಮರ ವೃತ್ತದಲ್ಲಿ ಆಟೊ ಚಾಲಕರು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು

ಆರೋಗ್ಯ ಇಲಾಖೆ ನೀಡುವ ಸಲಹೆ

  • ನೀರು ಮಜ್ಜಿಗೆ ಎಳೆನೀರು ಹಣ್ಣಿನ ರಸ ಹೆಚ್ಚಾಗಿ ಕುಡಿಯಬೇಕು. ‌

  • ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು ಹಣ್ಣುಗಳನ್ನು ಸೇವಿಸಬೇಕು.

  • ಸಡಿಲವಾದ ತೆಳುಬಣ್ಣದ ಹತ್ತಿ ಬಟ್ಟೆ ಗಾಳಿಯಾಡುವ ಪಾದರಕ್ಷೆ ಧರಿಸುವುದು ಉತ್ತಮ.

  • ಕಾರ್ಮಿಕರು ಬೆಳಿಗ್ಗೆ 11 ಗಂಟೆ ಒಳಗೆ ಹಾಗೂ ಸಂಜೆ 4 ಗಂಟೆ ನಂತರ ದುಡಿಯುವುಸು ಒಳ್ಳೆಯದು.

  • ಟೀ ಕಾಫಿ ಮತ್ತು ಹೆಚ್ಚು ಸಕ್ಕರೆ ಅಂಶ ಹೊಂದಿರುವ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಬೇಕು.

  • ವೃದ್ಧರು ಗರ್ಭಿಣಿಯರು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಮಧ್ಯಾಹ್ನ ಮನೆಯಿಂದ ಹೊರಗೆ ಬರದಿರುವುದು ಉತ್ತಮ.

ಆರೋಗ್ಯ ಇಲಾಖೆ ಸನ್ನದ್ಧ
ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟದ ಕಾರಣ ಜಿಲ್ಲೆಯನ್ನು ಕೆಂಪು ಪಟ್ಟಿಗೆ ಸೇರಿಸಿಲ್ಲ. ಆದರೂ ಆರೋಗ್ಯ ಇಲಾಖೆ  ಸನ್ನದ್ಧವಾಗಿದೆ. ಶಾಖಾ ಹೆಚ್ಚಾಗಿ ನಿತ್ರಾಣರಾದರೆ(ಸನ್ ಸ್ಟ್ರೋಕ್) ಅವರಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿರುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥಬಾಬು ಹೇಳಿದರು. ‘ಜಿಲ್ಲೆಯಲ್ಲಿ ಸನ್ ಸ್ಟ್ರೋಕ್ ಪ್ರಕರಣಗಳು ವರದಿಯಾಗಿಲ್ಲ. ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಕುಸಿದು ಬೀಳುವುದು ಇದರ ಲಕ್ಷಣ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತಂದು ಗ್ಲೂಕೋಸ್ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಆ ಹಂತಕ್ಕೆ ತಾಪಮಾನ ಹೋಗಿಲ್ಲ’ ಎಂದರು.  ಬೇಸಿಗೆಯಲ್ಲಿ ರೋಗಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತದೆ. ಮಕ್ಕಳಿಗೆ ಗಂಟಲು ಬೇನೆ ಪ್ರಕರಣಗಳು ಬೇಸಿಗೆಯಲ್ಲಿ ಸಾಮಾನ್ಯ. ಈ ವರ್ಷ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಪದೇ ಪದೇ ನೀರು ಕುಡಿಯಬೇಕು. ನೀರಿನಂಶ ಇರುವ ಪದಾರ್ಥಗಳನ್ನು ಸೇವಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್ ವಿವರಿಸಿದರು.
ತಾಪಕ್ಕೆ ನಲುಗಿದ ತರೀಕೆರೆ
ತರೀಕೆರೆ: ಅರೆ ಮಲೆನಾಡಾಗಿರುವ ತರೀಕೆರೆ ತಾಲೂಕಿನ ವ್ಯಾಪ್ತಿಯಲ್ಲಿ ಏಪ್ರಿಲ್ ಪ್ರಾರಂಭವಾದಾಗಿನಿಂದ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಈವರೆಗೆ ದಾಖಲಾಗಿರುವ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ತರೀಕೆರೆ ತಾಲೂಕಿನಲ್ಲಿ ಬಹುತೇಕ ಜಲ ಮೂಲಗಳು ಬತ್ತಿ ಹೋಗುತ್ತಿವೆ.   ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬರುತ್ತವೆ. ಶಾಲಾ ಮಕ್ಕಳು ವೃದ್ಧರು ಮಹಿಳೆಯರು ಮನೆಯನ್ನು ಬಿಟ್ಟು ಹೊರಗೆ ಬರಲಾಗದೆ ಅಪಹಪಿಸುತ್ತಿದ್ದಾರೆ. ಅನಿವಾರ್ಯ ಸಂದರ್ಭಗಳಿಂದ ಹೊರ ಬಂದಾಗ ಬಿರು ಬಿಸಿಲಿನಿಂದ ತೊಂದರೆಯಾಗಿದೆ. ಇದನ್ನು ಅರಿತ ಕೆಲವು ಸೇವಾ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇನ್ನು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ ರೈಲು ನಿಲ್ದಾಣ ಆಸ್ಪತ್ರೆ ಸೇರಿ ಮುಂತಾದ ಸ್ಥಳಗಳಲ್ಲಿ ನೀರನ್ನು ಸರಬರಾಜು ಮಾಡಬೇಕು ಎಂದು ಜನ ಮನವಿ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳಿಗಂತೂ ಕುಡಿಯುವ ನೀರಿನ ತೊಂದರೆ ಬಹಳಷ್ಟು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮನೆಯ ಮುಂಭಾಗ ಅಥವಾ ಮನೆಯ ಮೇಲ್ಚಾವಣಿಯ ಮೇಲೆ ನೀರಿನ ವ್ಯವಸ್ಥೆ ಮಾಡುವುದು ಸೂಕ್ತ ಎನ್ನುತ್ತಾರೆ. ಇಂತಹ ಭೀಕರ ಕ್ಷಾಮವನ್ನು ಮನಗಂಡು ಸಾರ್ವಜನಿಕರು ವಾಹನ ಸರ್ವಿಸ್ ಸ್ಟೇಷನ್‌ ರೀತಿಯ ಸ್ಥಳಗಳಲ್ಲಿ ಅನವಶ್ಯಕವಾಗಿ ನೀರನ್ನು ಪೋಲು ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲೆಯ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಮಳೆ ಬಂದಿದ್ದರೂ ಸಹ ತಾಲ್ಲೂಕಿನಲ್ಲಿ ಈವರೆಗೂ ಮಳೆಯಾಗಿಲ್ಲ.
ಮಕ್ಕಳಲ್ಲಿ ಗಂಟಲ ಬೇನೆ ಉಲ್ಬಣ
ಮೂಡಿಗೆರೆ: ತಾಲ್ಲೂಕಿನಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ‌ ಉಲ್ಬಣವಾಗುತ್ತಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಮಲೆನಾಡಿನಲ್ಲಿ ಗರಿಷ್ಟ ಉಷ್ಣಾಂಶವು 35 ಡಿಗ್ರಿಯಷ್ಟು ತಲುಪಿದ್ದು ಹಗಲು ವೇಳೆಯಲ್ಲಿ ಹೊರಗೆ ಓಡಾಟ ಸಾಧ್ಯವಾಗದ ಸ್ಥಿತಿ ಇದೆ.  ಮಕ್ಕಳಲ್ಲಿ ಗಂಟಲು ಬೇನೆ ಜ್ವರದಂತಹ ರೋಗಗಳು ಉಲ್ಬಣಿಸ ತೊಡಗಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನವೂ ಗಂಟಲು ಊದಿರುವ ಮಕ್ಕಳು ತಪಾಸಣೆಗೆ ಬರುತ್ತಿದ್ದಾರೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗದ್ದೆ ಕೆಲಸಗಳಿಗೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು ಈಗಾಗಲೇ ಗದ್ದೆಗಳಲ್ಲಿ ಬೆಳೆದಿರುವ ಹಸಿಮೆಣಸು ಬೀನ್ಸ್ ತರಕಾರಿಗಳ ಕೊಯ್ಲಿಗೂ ಜನ ಸಿಗದೇ ಬೆಳಿಗ್ಗೆ - ಸಂಜೆ ಕೆಲಸ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಕಟ್ಟಡ ನಿರ್ಮಾಣ‌ ಕಾಮಗಾರಿಗಳಿಗೂ ಕಾರ್ಮಿಕರು ನಸುಕಿನಿಂದಲೇ ಪ್ರಾರಂಭಿಸಿ ಮಧ್ಯಾಹ್ನದ ಬಿಸಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಳ್ಳ ಝರಿ ತೊರೆಗಳು ಸಂಪೂರ್ಣವಾಗಿ ಬತ್ತಿದ್ದು ಪ್ರಾಣಿ –ಪಕ್ಷಿಗಳಿಗೆ ನೀರಿಲ್ಲದೇ ಪರಿತಪಿಸುವಂತಾಗಿದೆ.
ಜನ ಸಂಚಾರ ಕಡಿಮೆ
ಕೊಪ್ಪ: ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು ತಾಲ್ಲೂಕಿನ ಜನ ಮಳೆಗಾಗಿ ಕಾಯುತಿದ್ದಾರೆ. ತಾಪ ತಾಳಲಾಗದೆ ಜನರು ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ ಇತ್ಯಾದಿ ಹಣ್ಣುಗಳ ಖರೀದಿ ಮಾಡಿ ಸೇವಿಸುತ್ತಿದ್ದಾರೆ. ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಮನೆಗಳಲ್ಲಿ ಫ್ಯಾನ್‌ ಇಲ್ಲದೆ ಮಲಗುವುದೇ ಕಷ್ಟವಾಗಿದೆ. ಬಿಸಿಲು ಹೆಚ್ಚಾಗಿರುವುದರಿಂದ ಪಟ್ಟಣದಲ್ಲಿ ಜನ ಸಂಚಾರವೇ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.