ADVERTISEMENT

ಐತಿಹಾಸಿಕ ಸ್ಮಾರಕ ರಕ್ಷಣೆಗೆ ಕ್ರಮ ವಹಿಸಿ: ಸಚಿವ ಸಿ.ಟಿ.ರವಿ

ಪ್ರವಾಸೋದ್ಯಮ, ಕನ್ನಡ–ಸಂಸ್ಕೃತಿ, ಕ್ರೀಡಾ ಇಲಾಖೆ ಅಭಿವೃದ್ಧಿ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:27 IST
Last Updated 16 ಸೆಪ್ಟೆಂಬರ್ 2020, 14:27 IST
ಚಿಕ್ಕಮಗಳೂರಿನಲ್ಲಿ ಬುಧವಾರ ಸಚಿವ ರವಿ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದಲ್ಲಿ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ಬುಧವಾರ ಸಚಿವ ರವಿ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದಲ್ಲಿ ಮಾತನಾಡಿದರು.   

ಚಿಕ್ಕಮಗಳೂರು: ‘‌ರಾಜ್ಯದ ಎಲ್ಲ ಜಿಲ್ಲೆಗಳ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಉದ್ದೇಶದಿಂದ ಸರ್ಕಾರವು ಸಂರಕ್ಷಣಾ ಯೋಜನೆ ಜಾರಿಗೊಳಿಸಿದೆ. ಸ್ಮಾರಕಗಳ ರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಪ್ರವಾಸೋದ್ಯಮ, ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಕೆಸ್ವಾನ್‌ನಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ರೀಡಾ ಇಲಾಖೆಗಳಲ್ಲಿನ ಅಭಿವೃದ್ಧಿ ಪ್ರಗತಿ ಪರಿಶೀಲನೆ ಕುರಿತು ವಿಡಿಯೊ ಸಂವಾದ ನಡೆಸಿ, ಮಾತನಾಡಿದರು.

‘ಐತಿಹಾಸಿಕ ದೇಗುಲಗಳು, ಸ್ಮಾರಕಗಳು ಸಹಿತ ಹಲವು ವೈಶಿಷ್ಟ್ಯ ಸ್ಥಳಗಳ ರಕ್ಷಣೆ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಪುರಾತತ್ವ ಇಲಾಖೆ ಹಾಗೂ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸಹಯೋಗದಲ್ಲಿ ಜೀರ್ಣೋದ್ಧಾರ ಕೈಗೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲೂ ಪುರಾತತ್ವ ಇಲಾಖೆ ದಾಖಲೆಗಳ ಪಟ್ಟಿಯಲ್ಲಿ ಇರದ ಐತಿಹಾಸಿಕ ಸ್ಥಳಗಳಿದ್ದರೆ ಅಂತಹವನ್ನು ಗುರುತಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು. ಜತೆಗೆ ಪ್ರತಿ ಪ್ರವಾಸಿ ತಾಣದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಬೇಕು. ಕಾಮಗಾರಿಗೆ ಅನುದಾನ ಬಾಕಿ ಇದ್ದರೆ, ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.

ವಿಶ್ವಪಾರಂಪರಿಕ ತಾಣಗಳ ರಕ್ಷಣೆ ಎಲ್ಲರ ಜವಾಬ್ದಾರಿ. ಬಾದಾಮಿ, ಹಂಪಿ, ಪಟ್ಟದಕಲ್ಲು ಸಹಿತ ವಿವಿಧ ತಾಣಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಅಭಿವೃದ್ಧಿಗೆ ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಬೇಕು ಎಂದರು.

‘ಪ್ರವಾಸೋದ್ಯಮ ಮತ್ತಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ವೆಬ್‌ಸೈಟ್ ಪುಟಗಳಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ದಾಖಲಿಸಬೇಕು. ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ ಬೀಚ್‌ಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಮತ್ತು ಕಾಮಗಾರಿಗಳ ಜಾಗದ ವಿಷಯದಲ್ಲಿ ವಿವಿಧ ಇಲಾಖೆಗಳ ನಡುವೆ ಸಮಸ್ಯೆಗಳಿದ್ದರೆ ಜಂಟಿ ಸಭೆ ನಡೆಸಿ ಪರಿಹರಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ರಾಜ್ಯದ 79 ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ಸಮಸ್ಯೆ ಇದೆ. ಜಿಲ್ಲಾಧಿಕಾರಿಗಳು ಕ್ರೀಡಾಂಗಣಕ್ಕೆ ಜಾಗ ಗುರುತಿಸಬೇಕು. ಮೀಸಲಿಟ್ಟ ಜಾಗವು ಅಕ್ರಮವಾಗಿ ಒತ್ತುವರಿಯಾಗಿದ್ದಲ್ಲಿ ತೆರವಿಗೆ ಕ್ರಮ ವಹಿಸಬೇಕು. ‘ಖೇಲ್ ಇಂಡಿಯಾ’ ಅಡಿ ಸುಸಜ್ಜಿತ ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಅಂದಾಜು 50 ರಿಂದ 60 ಎಕರೆ ಅಗತ್ಯ ಇದ್ದು, ಜಾಗ ಗುರುತಿಸಿದ್ದಲ್ಲಿ ನಿರ್ಮಾಣಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಡಾ. ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ವಿ.ಎಲ್.ಎನ್.ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.