ನರಸಿಂಹರಾಜಪುರ: ತಾಳೆ ಬೆಳೆಯ ವಿದೇಶಿ ಮತ್ತು ಸ್ವದೇಶಿ ತಳಿಗಳನ್ನು ವಿತರಣೆ ಮಾಡಲಾಗುತ್ತಿದ್ದು, ಬೆಳೆಗಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕ ರೋಹಿತ್ ಹೇಳಿದರು.
ಇಲ್ಲಿನ ಕೃಷಿ ಇಲಾಖೆಯಲ್ಲಿ ಮಂಗಳವಾರ ನಡೆದ ತಾಲ್ಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯ ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಸೌಲಭ್ಯಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಅಡಿಕೆ ಸುಲಿಯುವ ಯಂತ್ರ, ಪಾಲಿಷರ್, ದೋಟಿಗೆ ಬೇಡಿಕೆಯಿದ್ದು ಸಹಾಯಧನ ಲಭ್ಯವಿದೆ. ಜೇನು ಪೆಟ್ಟಿಗೆ ಲಭ್ಯವಿದ್ದು, ಒಬ್ಬರಿಗೆ 2 ಪೆಟ್ಟಿಗೆ ವಿತರಣೆ ಮಾಡಲಾಗುವುದು. ಜುಲೈ 1ರಿಂದ ಬೆಳೆ ವಿಮೆ ಯೋಜನೆ ಪ್ರಾರಂಭವಾಗಲಿದೆ. ಉದ್ಯೋಗ ಖಾತರಿ ಯೋಜನೆ, ಗಿಡಗಳ ವಿತರಣೆ, ತುಂತುರು ನೀರಾವರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಮಹೇಶ್ ಮಾತನಾಡಿ, ‘ಜನವರಿಯಿಂದ ಜೂನ್‌ವರೆಗೆ ಎರಡು ಪಟ್ಟು ಮಳೆಯಾಗಿದ್ದು, ರೈತರಿಗೆ ಇಲಾಖೆಯಿಂದ ಭತ್ತದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರು ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಜ್ಯೇಷ್ಠತೆಗೆ ಅನುಸಾರ ಸವಲತ್ತು ಪಡೆಯಬಹುದು. 2024–25ನೇ ಸಾಲಿನ ಸ್ಪಿಂಕ್ಲರ್, ಪಿವಿಸಿ ಪೈಪ್ಸ್ ನಮೂನೆಯನ್ನು ಸ್ಪೈಟ್ ಮೈಸೂರು ಅವರಿಗೆ ಸಲ್ಲಿಸಲಾಗಿದ್ದು, ವರದಿ ಬಂದಿದ್ದು ಯಾವುದೇ ಕಳಪೆ ಕಂಡು ಬಂದಿಲ್ಲ’ ಎಂದರು.
ಜಾನುವಾರು ಆಕಸ್ಮಿಕವಾಗಿ ಮರಣ ಹೊಂದಿದರೆ ₹15 ಸಾವಿರ ಸಹಾಯಧನ, ಕುರಿ ಮತ್ತು ಮೇಕೆಗಳು ಮರಣ ಹೊಂದಿದರೆ ₹7,500 ಸಹಾಯಧನ ನೀಡಲಾಗುವುದು. ಮೇವಿನ ಜೋಳ ವಿತರಣೆ ಮಾಡುತ್ತಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿ ತಿಳಿಸಿದರು.
ಮೀನುಗಾರಿಕೆ ಇಲಾಖೆಯಲ್ಲಿ ಮೀನು ಮರಿಗಳಿದ್ದು, ಮೀನುಗಾರರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಿರಂಜನ್ ಮೂರ್ತಿ ಮಾತನಾಡಿ, ‘7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಜೂನ್ 21ರಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬಳಿಕ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದರು.
ನರಸಿಂಹರಾಜಪುರ ಟಿಎಪಿಸಿಎಂಎಸ್‌ನ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಮಾತನಾಡಿದರು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಜಿ.ಮಂಜಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ಮವೀನ್, ಖಜಾಂಚಿ ಬಿ.ಎಸ್.ಚೇತನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ವೈ.ಎಸ್.ಸುಬ್ರಹ್ಮಣ್ಯ, ಎಚ್.ಆರ್.ತಿಮ್ಮಯ್ಯ, ಎನ್.ಎಲ್.ತೀರ್ಥೇಶ್, ಎಚ್.ಎಂ.ನಾಗರಾಜ್, ಎನ್.ಪಿ.ರಮೇಶ್, ವೈ.ಎಸ್.ರವಿ, ಎನ್.ಎಸ್.ರಂಜಿತ್, ಎಂ.ವಿ.ಶ್ರೀನಿವಾಸ್ ಇದ್ದರು. 2022–23ನೇ ಸಾಲಿನ ಆತ್ಮ ಯೋಜನೆಯಡಿ ಪ್ರಶಸ್ತಿ ಪಡೆದ ಬಿ.ವಿ.ದಿನೇಶ್ ಕುಮಾರ್ ಅವರಿಗೆ ಕೃಷಿ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.