ADVERTISEMENT

‘ಕನ್ನಡ ಮನಸ್ಸು ಅರಳಿಸುವ ಕಾರ್ಯ ಮಾಡುತ್ತದೆ’

ತರೀಕೆರೆಯಲ್ಲಿ ಕರ್ನಾಟಕ ರಾಜ್ಯೋತ್ಸವ, ಕನ್ನಡ ನಿತ್ಯೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:16 IST
Last Updated 10 ಡಿಸೆಂಬರ್ 2025, 4:16 IST
ತರೀಕೆರೆ ಪಟ್ಟಣದ ಶೃಂಗೇರಿ ಶಾರದಾ ಸಭಾಭವನದಲ್ಲಿ ತರೀಕೆರೆ-ಅಜ್ಜಂಪುರ ಎಂಜಿನಿಯರ್ಸ್ ಅಸೋಸಿಯೇಷನ್, ಶ್ರೀವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ-ಕನ್ನಡ ನಿತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು 
ತರೀಕೆರೆ ಪಟ್ಟಣದ ಶೃಂಗೇರಿ ಶಾರದಾ ಸಭಾಭವನದಲ್ಲಿ ತರೀಕೆರೆ-ಅಜ್ಜಂಪುರ ಎಂಜಿನಿಯರ್ಸ್ ಅಸೋಸಿಯೇಷನ್, ಶ್ರೀವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ-ಕನ್ನಡ ನಿತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು    

ತರೀಕೆರೆ: ‘ಕರ್ನಾಟಕ ರಾಜ್ಯೋತ್ಸವವು ನಿತ್ಯೋತ್ಸವವಾಗುತ್ತಿದೆ, ಕನ್ನಡ ಭಾಷೆಯು ಮನಸ್ಸು ಅರಳಿಸುವ ಕಾರ್ಯ ನಿರ್ವಹಿಸುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಶೃಂಗೇರಿ ಶಾರದಾ ಸಭಾಭವನದಲ್ಲಿ ಮಂಗಳವಾರ ತರೀಕೆರೆ-ಅಜ್ಜಂಪುರ ತಾಲ್ಲೂಕು ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ಶ್ರೀವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಕನ್ನಡ ಸಾಹಿತ್ಯ ಪರಿಷತ್‌ ತರೀಕೆರೆ ತಾಲ್ಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ-ಕನ್ನಡ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವ ನಡೆಯುತ್ತದೆ, ಕನ್ನಡ ನಿತ್ಯೋತ್ಸವವು ವರ್ಷಪೂರ್ತಿ ನಡೆಯುತ್ತದೆ. ಇಂದು ಇಲ್ಲಿ ನುಡಿ ಜಾತ್ರೆ ಕಾರ್ಯಕ್ರಮ ನಡೆದಿದ್ದು, ಕನ್ನಡ ಕಟ್ಟುಪ ಕೆಲಸವಾಗಿದೆ. ಎಂಜಿನಿಯರ್ಸ್ ಮತ್ತು ಕಾರ್ಮಿಕರ ನೈಪುಣ್ಯತೆಯಿಂದ ನಾವೆಲ್ಲಾ ನೆಮ್ಮದಿಯಿಂದ ಇದ್ದೇವೆ. ಶ್ರಮಜೀವಿಗಳು ಕಟ್ಟಿದ ಲಕ್ಕವಳ್ಳಿ ಅಣೆಕಟ್ಟು ಎಲ್ಲರ ನೆನಪಿನಲ್ಲಿದೆ ಎಂದು ಹೇಳಿದರು.

ADVERTISEMENT

ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ ಅವರ ಮಾತೃಭಾಷೆ ಬೇರೆಯಾದರೂ ಈ ಮಹನೀಯರು ಕನ್ನಡದ ಬಗ್ಗೆ ವಿಶೇಷವಾದ ಒಲವು ತೋರಿಸಿದ್ದಾರೆ.  ಕನ್ನಡಕ್ಕೆ ಕೈ ಎತ್ತಿದರೆ, ಉಚ್ಛ್ರಾಯ ಸ್ಥಿತಿಗೆ ಬರುತ್ತಾರೆ ಎಂದರು.

ಪುರಸಭಾಧ್ಯಕ್ಷ ವಸಂತಕುಮಾರ್ ಮಾತನಾಡಿ, ರಾಜ್ಯೋತ್ಸವ ಮತ್ತು ನಿತ್ಯೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಮಾಡಿದ್ದೀರಿ. ಈ ಕಾರ್ಯಕ್ರಮದ ಪ್ರಯುಕ್ತ ಪುರಸಭಾ ಕಚೇರಿಯಲ್ಲಿ ಒಂದು ಗಂಟೆ ಹೆಚ್ಚು ಹೊತ್ತು ಕಾರ್ಯನಿರ್ವಹಿಸುತ್ತೇನೆ. ಎಲ್ಲರಿಗೂ ಶುಭಾಶಯಗಳು ಎಂದು ತಿಳಿಸಿದ ಅವರು, ಸುಶ್ರಾವ್ಯವಾಗಿ ಕನ್ನಡ ಗೀತೆಯನ್ನು ಹಾಡಿದರು.

ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಶ್ರೀಪತಿ ಹಳಗುಂದ ಅವರು ಉಪನ್ಯಾಸ ನೀಡಿದರು. ಎಂಜಿನಿಯರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಟಿ.ಆರ್.ಮುರುಳಿ, ಅಸೋಸಿಯೇಷನ್ ಅಧ್ಯಕ್ಷ ಟಿ.ಯು. ವಸಂತ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಎಚ್.ಸಿ. ಗೋಪಾಲಕೃಷ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್, ಕಾರ್ಮಿಕ ನಿರೀಕ್ಷಕ ಎಚ್.ಕೆ. ಪ್ರಭಾಕರ್ ಮಾತನಾಡಿದರು.

ಶ್ರೀವಾಸ್ತುಶಿಲ್ಪ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲ ಸುಬ್ರಮಣಿ ಆರ್. ಪುಷ್ಪಾರ್ಚನೆ ನೆರವೇರಿಸಿದರು. ಶ್ರೀವಾಸ್ತುಶಿಲ್ಪ ಕಟ್ಟಡ ಕಾರ್ಮಿಕರ ಸಂಘ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸದ್ವಿದ್ಯಾ ಶಾಲೆ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ರೂಪಕ ಏರ್ಪಡಿಸಲಾಗಿತ್ತು.

ಎಂಜಿನಿಯರ್ಸ್ ಸಂಘದ ಉಪಾಧ್ಯಕ್ಷ ಕೆ.ಎಂ. ಚೇತನ್‍ ಕುಮಾರ್, ಜಶವಂತ ಗೌಡ, ಕಾರ್ಮಿಕರ ಸಂಘ ಉಪಾಧ್ಯಕ್ಷ ಬೋಜರಾಜ್, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.