
ತರೀಕೆರೆ: ‘ಪೋಷಕರು ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕಾರ ಕಲಿಸುವಲ್ಲಿ ಹಿನ್ನಡೆಯಾಗಿದ್ದು, ಇದರಿಂದ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಆಗಿದೆ. ಈ ಕಾರಣದಿಂದ ಅನ್ಯರ ದಾಳಿಗೆ ತುತ್ತಾಗುತ್ತಿದ್ದೇವೆ’ ಎಂದು ತಾಲ್ಲೂಕಿನ ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಹಿಂದೂ ಸಮಾಜೋತ್ಸವದ ಆಯೋಜನಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ. ನಮ್ಮ ಮಕ್ಕಳನ್ನು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕು. ಇಂದು ನಾವು ಶಾಂತ ಚಿತ್ತರಾಗಿದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು ಛತ್ರಪತಿ ಶಿವಾಜಿ ಮತ್ತು ಸ್ವಾಮಿ ವಿವೇಕಾನಂದರಂತಾಗಿ ಮಾಡಬೇಕು ಎಂದರು.
ಭಾರತೀಯರನ್ನು ಶಿಕ್ಷಣ ಮತ್ತು ಸಂಸ್ಕಾರವನ್ನು ಹಾಳುಮಾಡಿದರೆ, ಅವರನ್ನು ನಾವು ಆಳಬಹುದು ಎಂದು ಹಿಂದೂಗಳನ್ನು ತುಂಡು-ತುಂಡಾಗಿ ಮಾಡುತ್ತಿದ್ದಾರೆ. ಪ್ರಕೃತಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿಯಾಗಿದೆ. ನಮ್ಮ ಬದುಕು ಮತ್ತು ನೆಲವನ್ನು ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
ದಿಕ್ಸೂಚಿ ಭಾಷಣವನ್ನು ಮಾಡಿದ ವಿಕಾಸ್ ಪುತ್ತೂರು ಮಾತನಾಡಿ, ಆರ್‌ಎಸ್‌ಎಸ್ ಸ್ಥಾಪನೆಯಾಗಿ ನೂರು ವರ್ಷದ ತುಂಬಿದ ಶತಮಾತೋತ್ಸವದ ಅಂಗವಾಗಿ ವರ್ಷವಿಡೀ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘ ಸ್ಥಾಪನೆಯಾದಾಗಿನಿಂದ ಹಲವು ತೊಂದರೆಗಳನ್ನು ಎದುರಿಸಿಕೊಂಡು ಬಂದಿದೆ. ತೊಂದರೆಗಳಿದ್ದರೂ ನಮ್ಮ ಗುರಿಯೆಡೆಗೆ ಸಾಗುತ್ತಲೇ ಬರುತ್ತಿದೆ ಎಂದರು.
ವಿವಿಧ ಸಂಘಗಳ ಅಡಿಯಲ್ಲಿ ವಿದ್ಯಾರ್ಥಿಗಳು, ರೈತರು, ಮಹಿಳೆಯರ ಮತ್ತು ಹಿಂದೂಗಳ ಪರ ಹೋರಾಟವನ್ನು ನಮ್ಮ ಸಂಘದ ಕೆಲಸ ಮಾಡುತ್ತಿದೆ. ರಾಷ್ಟ್ರ ನಿರ್ಮಾಣ ನಮ್ಮ ಗುರಿ. ಹಿಂದುತ್ವ ಪ್ರೇರಣಾ ಶಕ್ತಿ. ಹಿಂದೂ ಧರ್ಮದ ಉಳಿವಿಗೆ ನಾವೆಲ್ಲರೂ ಒಗ್ಗೂಡಬೇಕು ಎಂದರು.
ಸಮಾಜವನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಸಂಘ ಸಾಮಾಜಿಕ ಸಾಮರಸ್ಯ, ಸ್ವದೇಶಿ ಚಿಂತನೆ, ಕುಟುಂಬ ವ್ಯವಸ್ಥೆ, ಪ್ರಕೃತಿ ಆರಾಧನೆ ಮತ್ತು ನಾಗರಿಕ ಶಿಷ್ಟಾಚಾರ ಎಂಬ ಐದು ಸೂತ್ರವನ್ನು ರೂಪಿಸಿದೆ ಎಂದರು.
ನಿಶಾ ಭಾರತ್ ಸಂಚಾಲಕಿ ಅಶ್ವಿನಿ ನಟರಾಜ್ ಮಾತನಾಡಿ, ನೂರು ವರ್ಷಗಳ ನಂತರ ನಮ್ಮ ಭಾರತ ವಿಶ್ವಗುರುವಾಗಿದೆ. ಈ ನೆಲದ ತಾಯಿ ಸಂಸ್ಕೃತಿ, ಸಂಸ್ಕಾರ ಉಳಿಸಿದ್ದಾರೆ. ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮರಂತಹ ಹಲವರು ಸೇರಿದಂತೆ ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದಲ್ಲಿ ನಮ್ಮ ಮಹಿಳೆಯರು ದೇಶ ರಕ್ಷಣೆಯಲ್ಲಿ ಮುಂದಾಗಿದ್ದಾರೆ ಎಂದರು.
ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಸ್ವಾಗತಿಸಿ, ಜ್ಞಾನದೇಗುಲ ವಿದ್ಯಾರ್ಥಿಗಳಿಂದ ವಚನ ಗಾಯನ ಮಾಡಿದರು.
ಸಮಾವೇಶಕ್ಕೂ ಮೊದಲು ಪಟ್ಟಣದ ಕೋಡಿಕ್ಯಾಂಪ್ ಓಂ ವೃತ್ತದಿಂದ ಬಯಲು ರಂಗಮಂದಿರದ ವರೆಗೆ ವಿವಿಧ ಕಲಾತಂಡಗಳೊಂದಿಗೆ ಶೋಭಾಯಾತ್ರೆ ನಡೆಸಲಾಯಿತು.
ಮಾಜಿ ಶಾಸಕ ಡಿ.ಎಸ್.ಸುರೇಶ್, ಕೆ.ಆರ್.ಆನಂದಪ್ಪ, ಸೇರಿದಂತೆ ಸಂಘ ಪರಿವಾರದ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.