ADVERTISEMENT

ತರೀಕೆರೆ: ಬಹುಪಾಲು ರಸ್ತೆ ಗುಂಡಿಮಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:37 IST
Last Updated 22 ಅಕ್ಟೋಬರ್ 2025, 6:37 IST
ಕಲ್ಲತ್ತಿಗಿರಿ ಮತ್ತು ಕೆಮ್ಮಣ್ಣುಗುಂಡಿ ನಡುವಿನ ರಸ್ತೆ
ಕಲ್ಲತ್ತಿಗಿರಿ ಮತ್ತು ಕೆಮ್ಮಣ್ಣುಗುಂಡಿ ನಡುವಿನ ರಸ್ತೆ   

ತರೀಕೆರೆ: ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಬಹುಪಾಲು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಈ ಗುಂಡಿಗಳನ್ನು ಮುಚ್ಚಲು ಮಳೆ ಬಿಡುವು ನೀಡುತ್ತಿಲ್ಲ.

ಈ ಗುಂಡಿಗಳಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯ ಜೊತೆಗೆ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಶಾಲಾ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅವರಿಗೆ ರಾಡಿ ನೀರಿನ ಸಿಂಚನವಾಗುತ್ತಿದೆ.

ಇನ್ನು ಪಟ್ಟಣದಲ್ಲಿ ಬಿ.ಎಚ್. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಬಾಕ್ಸ್‌ ಚರಂಡಿ ಮತ್ತು ಸೇತುವೆಗಳು ಭಾಗಶಃ ಮುಕ್ತಾಯದ ಹಂತದಲ್ಲಿವೆ. ಇದರಿಂದ ರಸ್ತೆಯಲ್ಲಿ ಉಬ್ಬು-ತಗ್ಗುಗಳು ವಿಪರೀತವಾಗಿದ್ದು, ಮಳೆ ಬಂದಾಗ ಅಲ್ಲಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಗುಂಡಿಗಳು ಇರುವುದು ಗೊತ್ತಾಗದೆ ಅಪಘಾತಗಳು ಸಂಭವಿಸಿವೆ. ಪುರಸಭೆ ವ್ಯಾಪ್ತಿಯ ಕೋಟೆ ಕ್ಯಾಂಪ್, ಹಳಿಯೂರು, ಉಪ್ಪಾರ ಬಸವನಹಳ್ಳಿ, ಪಾಳೆಗಾರರ ಕ್ಯಾಂಪ್, ಕೋಡಿಕ್ಯಾಂಪ್, ಗಾಳಿಹಳ್ಳಿ, ಮಾಚೇನಹಳ್ಳಿ ಭಾಗಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ.

ADVERTISEMENT

ಲಿಂಗದಹಳ್ಳಿ ಹೋಬಳಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಾದ ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿ, ಹೆಬ್ಬೆಫಾಲ್ಸ್ ಗಳಿಗೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೆ ಇದೆ. ಆದರೆ ಇಲ್ಲಿಗೆ ತಲುಪುವ ರಸ್ತೆಗಳು ಅಲ್ಲಲ್ಲಿ ಹಾಳಾಗಿದ್ದು ಪ್ರವಾಸಿಗರ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕಾಫಿ ಎಸ್ಟೇಟ್ ಭಾಗದಲ್ಲಿರುವ ದೂಪದಕಾನ್, ಕುರಕಲಮಟ್ಟಿ ಎಸ್ಟೇಟ್, ತಣಿಗೇ ಬೈಲು, ಜೈಪುರ, ತಿಗಡ, ನಂದಿಬಟ್ಟಲು ಕಾಲೊನಿ ಈ ಭಾಗದಲ್ಲಿ ರಸ್ತೆಗಳು ಅತೀ ಹೆಚ್ಚು ಹಾಳಾಗಿವೆ.

ಅಮೃತಾ ಹೋಬಳಿಯ ಪಿರುಮೇನಹಳ್ಳಿ, ಎ. ರಾಮನಹಳ್ಳಿ, ಬಿ. ರಾಮನಹಳ್ಳಿ, ಲಕ್ಕೇನಹಳ್ಳಿ ಯರೇಹಳ್ಳಿ, ಯರೇಹಳ್ಳಿ ತಾಂಡ್ಯ, ಹಾದೀಕೆರೆ, ಅಮೃತಾಪುರ, ವಿಠಲಾಪುರ, ಮುಂಡ್ರೆ, ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಾರ್ವಜನಿಕರಿಗೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.

ಲಕ್ಕವಳ್ಳಿ ಭಾಗದಲ್ಲಿ ಗುರುಪುರ, ಗುಡ್ಡದಬೀರನಹಳ್ಳಿ, ಜಂಭದಹಳ್ಳ, ದುಗ್ಲಾಪುರ, ಕರಕುಚ್ಚಿ, ಗೋಪಾಲ, ಸೋಂಪುರ, ರಂಗೇನಹಳ್ಳಿ, ಸ್ಟೇಷನ್ ದುಗ್ಲಾಪುರ ಭಾಗದ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಸಹ ಹಾಳಾಗಿವೆ.

ಕಸಬಾ ಹೋಬಳಿಯ ಮಳಲಿ ಚನ್ನೇನಹಳ್ಳಿ, ಬೇಲೇನಹಳ್ಳಿ, ಹಿರೇಕಾತೂತು, ಹೊಸೂರು, ಎಚ್. ತಿಮ್ಮಾಪುರ, ಗೇರಮರಡಿ, ದೋರನಾಳು, ಭೈರಾಪುರ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಗುಂಡಿಗಳಿಂದ ಹಾಳಾಗಿವೆ.

ತಾಲ್ಲೂಕಿನಲ್ಲಿ ಮಳೆಯ ಜೊತೆಗೆ ಪಟ್ಟಣದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಮೊದಲೇ ಹಾಳಾಗಿರುವ ರಸ್ತೆಗಳ ಮೇಲೆ ಜಲ್ಲಿ, ಕಬ್ಬಿಣ, ಸಿಮೆಂಟ್‍ ಮೊದಲಾದ ಸಾಮಗ್ರಿಗಳನ್ನು ತುಂಬಿಕೊಂಡು ಬರುತ್ತಿರುವ ಭಾರಿ ವಾಹನಗಳ ಸಂಚಾರ ಜೋರಾಗಿವೆ. ಇದಲ್ಲದೆ ಪಟ್ಟಣದ ಸಮೀಪವಿರುವ ಎಚ್. ತಿಮ್ಮಾಪುರ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜಲ್ಲಿ ಕ್ರಷರ್‌ಗಳಿಂದ ಬರುವ ಭಾರಿ ವಾಹನಗಳ ತಿರುಗಾಟದಿಂದಲೂ ರಸ್ತೆಗಳು ಹದಗೆಡುತ್ತಿವೆ ಎನ್ನುವುದು ಅಲ್ಲಿಯ ನಿವಾಸಿಗಳ ದೂರು.

‘ಶಾಸಕ ಜಿ.ಎಚ್. ಶ್ರೀನಿವಾಸ್‍ ಕ್ಷೇತ್ರದ ಕೆಲವು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಅನುದಾನ ತಂದಿದ್ದಾರೆ. ಮಳೆಯಿಂದಾಗಿ ಕಾಮಗಾರಿ ನಡೆಯುತ್ತಿಲ್ಲ. ಮಳೆ ನಿಂತ ನಂತರ ರಸ್ತೆಗಳ ರಿಪೇರಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ಸಾರ್ವಜನಿಕರ ಬೇಡಿಕೆ.

ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್‍ ನ ಬನಶಂಕರಿ ದೇವಸ್ಥಾನದ ಪಕ್ಕದ ರಸ್ತೆ
ರೋಪೆಲೈನ್ ಮತ್ತು ತಣಿಗೆ ಬೈಲು ಗ್ರಾಮದ ಬಳಿಯ ಪಿ ಡಬ್ಲ್ಯೂ ಡಿ. ರಸ್ತೆ 
ಯರೇಹಳ್ಳಿ ತಾಂಡ್ಯದಿಂದ ೆಚ್. ಮಲ್ಲೇನಹಳ್ಳಿಗೆ ಹೋಗುವ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.