ADVERTISEMENT

ತೇಜಸ್ವಿ ಅವರ ಬದುಕು ತೆರೆದಿಟ್ಟ ‘ನನ್ನ ತೇಜಸ್ವಿ’ ನಾಟಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:46 IST
Last Updated 23 ಡಿಸೆಂಬರ್ 2025, 6:46 IST
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನವನ್ನು ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನವನ್ನು ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು   

ಚಿಕ್ಕಮಗಳೂರು: ತೇಜಸ್ವಿ ಅವರ ಪ್ರೇಮದ ಬದುಕನ್ನು, ಸಾಂಸಾರಿಕ ಬದುಕನ್ನು ಅದ್ಬುತವಾಗಿ ರಂಗದ ಮೇಲೆ ತರುವ ಮೂಲಕ ‘ನನ್ನ ತೇಜಸ್ವಿ’ ನಾಟಕವು ಅವರ ಬದುಕನ್ನು ತೆರೆದಿಟ್ಟಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಆಯೋಜಿಸಿದ್ದ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ತೇಜಸ್ವಿ ಅವರ ಬದುಕಿನ ವಿವರಗಳು ಗೊತ್ತಿಲ್ಲದವರಿಗೆ ಈ ನಾಟಕವು ಆ ವಿವರಗಳನ್ನು ದಾಟಿಸುತ್ತದೆ. ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ತೇಜಸ್ವಿ ಅವರ ಕುರಿತ ವಸ್ತು ವಿಷಯ ಆಧರಿಸಿ ಪ್ರದರ್ಶನ ನಡೆಯಲಿದೆ. ಜ.15 ರಿಂದ 26 ರವರೆಗೆ ಈ ಪ್ರದರ್ಶನ ನಡೆಯಲಿದೆ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿ.ರಮೇಶ್ ಮಾತನಾಡಿ, ‘ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ನೂತನವಾಗಿ ಚಿಟ್ಟೆ ಉದ್ಯಾನ, ಆರ್ಕಿಡ್ ಲೋಕ ಅನಾವರಣಗೊಂಡಿದೆ. ಜೀವಲೋಕದ ಬೆರಗು, ಮಹತ್ವವನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದರು.

ವಿಮರ್ಶಕ ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ‘ತೇಜಸ್ವಿ ಪ್ರತಿಷ್ಠಾನದ ವತಿಯಿಂದ 2026ನೇ ಸಾಲಿನ ಕ್ಯಾಲೆಂಡರ್ ಹೊರ ತರಲಾಗಿದ್ದು, ಈ ಬಾರಿ ತೇಜಸ್ವಿ ಲೋಕ ಎಂಬ ಶೀರ್ಷಿಕೆಯಡಿ ಕ್ಯಾಲೆಂಡರ್ ರೂಪಿಸಲಾಗಿದೆ. ತೇಜಸ್ವಿ ಅವರ ಬದುಕಿನ ವಿವರಗಳು ಕ್ಯಾಲೆಂಡರ್‌ನ ಪುಟಗಳಲ್ಲಿ ಕಾಣಲಿವೆ. ಎಲ್ಲಾ ಪುಟಗಳಲ್ಲೂ ಪರಿಸರ ಸಂಬಂಧಿತ ದಿನಗಳ ಮಾಹಿತಿಯನ್ನು ಹಾಕಲಾಗಿದೆ’ ಎಂದು ಹೇಳಿದರು.

ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ರಾಘವೇಂದ್ರ, ರವೀಶ್ ಕ್ಯಾತನಬೀಡು, ರುದ್ರಸ್ವಾಮಿ, ದೀಪಾ ಹಿರೇಗುತ್ತಿ ಅವರು 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

‘ನನ್ನ ತೇಜಸ್ವಿ’ ನಾಟಕದ ನಿರ್ದೇಶಕ ಬಿ.ಎಂ.ಗಿರಿರಾಜ, ಕಲಾವಿದ ಪರಮ್ ಕಲಾಮಾಧ್ಯಮ, ಸವಿತಾ ಪರಮ್, ಕಾತ್ಯಾಯಿಣಿ, ರಾಧಾಮಣಿ, ರಂಗು ಸಮರ್ಪಣ್, ನವೀನ್ ಹರಿ ಸಮಷ್ಟಿ, ತೇಜಸ್, ರಾಘವೇಂದ್ರ ಪ್ರಸಾದ್, ಶೈಲೇಂದ್ರ ಸಿಂಗ್, ಭರತ್ ಬಿ.ಜೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀನಿವಾಸ್, ನವದೀಪ್, ಪೂರ್ಣೇಶ್, ಮಲ್ಲಿಕಾರ್ಜುನ್, ಕೀಟ ತಜ್ಞ ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸತೀಶ್ ತರುವೆ ಇದ್ದರು.