ADVERTISEMENT

ದೇಗುಲಗಳು ಮಾನವೀಯ ಮೌಲ್ಯ ಪೋಷಿಸುವ ಕೇಂದ್ರವಾಗಲಿ

ಬ್ಯಾಗದಹಳ್ಳಿ ಧಾರ್ಮಿಕ ಸಭೆಯಲ್ಲಿ ವಿರೂಪಾಕ್ಷಲಿಂಗಶಿವಾಚಾರ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 15:05 IST
Last Updated 9 ಫೆಬ್ರುವರಿ 2019, 15:05 IST
ಕಾರ್ಯಕ್ರಮ ಉದ್ಘಾಟನೆಯಲ್ಲಿ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗಶಿವಾಚಾರ್ಯ ಸ್ವಾಮೀಜಿ, ಸಮಾಜಸೇವಕಿ ಗೌರಮ್ಮಬಸವೇಗೌಡ, ಜಿಲ್ಲಾಪಂಚಾಯಿತಿ ಸದಸ್ಯ ಬಿ.ಜಿ.ಸೋಮಶೇಖರಪ್ಪ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟನೆಯಲ್ಲಿ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗಶಿವಾಚಾರ್ಯ ಸ್ವಾಮೀಜಿ, ಸಮಾಜಸೇವಕಿ ಗೌರಮ್ಮಬಸವೇಗೌಡ, ಜಿಲ್ಲಾಪಂಚಾಯಿತಿ ಸದಸ್ಯ ಬಿ.ಜಿ.ಸೋಮಶೇಖರಪ್ಪ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು:ದೇಗುಲಗಳು ಮನುಷ್ಯರ ಮನಸ್ಸಿನ ಕಲ್ಮಶ ತೊಳೆಯಬೇಕು. ಸಾತ್ವಿಕ ಪ್ರಜೆಗಳನ್ನು ತಯಾರಿಸುವ ಪ್ರಯೋಗ ಶಾಲೆಗಳಾಗಬೇಕು ಎಂದು ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಬ್ಯಾಗದಹಳ್ಳಿಯಲ್ಲಿ ಉದ್ಭವರಾಮೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರ ಪ್ರವೇಶೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಅವರು ಅವರು ಆಶೀರ್ವಚನ ನೀಡಿದರು.
ನಿರ್ಮಲವಾದ ಮನಸ್ಸಿನಿಂದ ಭಗವಂತನನ್ನು ಸ್ಮರಿಸಬೇಕು. ಆಗ ಅದು ಪರಮಾತ್ಮನನ್ನು ತಲುಪುತ್ತದೆ. ಆಧ್ಯಾತ್ಮಿಕ ಜ್ಞಾನದಿಂದ ಆತ್ಮದ ಉದ್ದಾರವಾಗುತ್ತದೆ ಎಂದರು.

ದೇಗುಲಗಳು ಸಂಪ್ರಾದಯ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಪೋಷಿಸುವ ಕೇಂದ್ರಗಳಾಗಬೇಕು. ಜನರಿಗೆ ಜೀವನದ ಅರಿವು ಮೂಡಿಸಬೇಕು. ಈ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ನಿತ್ಯ ನಡೆಯಬೇಕು. ವಾರಕ್ಕೊಮ್ಮೆಯಾದರೂ ಸತ್ಸಂಗ, ಭಜನೆ ಆಯೋಜಿಸಬೇಕು ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ದೇಗುಲಗಳು ಏಕಾಗ್ರತೆ ಮೂಡಿಸುವ ಮತ್ತು ಪ್ರಶಾಂತತೆ ನೀಡುವ ತಾಣಗಳಾಗಬೇಕು. ಆಗ ಅದು ದೇವರ ಇರುವಿಕೆಯ ಸಾಕ್ಷ್ಮಿ ಪ್ರಜ್ಞೆಯಾಗುತ್ತದೆ ಎಂದರು.

ADVERTISEMENT

ಕಲ್ಪನೆ ನಿರೀಕ್ಷೆಗಳನ್ನು ಮೀರಿ ವಿಜ್ಞಾನ ಬೆಳೆದಿದೆ. ಆದರೂ ವಿಜ್ಞಾನದಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮಕ ಜ್ಞಾನದಿಂದ ಶಾಂತಿ, ನೆಮ್ಮದಿ ದೊರೆಯುತ್ತದೆ. ಭಕ್ತಿ ಎನ್ನುವುದು ಭ್ರಮೆ ಅಲ್ಲ. ದೃಢವಾದ ನಂಬಿಕೆಯೆ ಭಕ್ತಿ ಎಂದರು.

ಅಂತರಂಗ ಶುದ್ಧಿಯಿಂದ ಪ್ರಾರ್ಥನೆ ಮಾಡಿದರೆ ದೇವರಿಗೆ ತಲುಪುತ್ತದೆ. ದೇಗುಲಗಳು ಆತ್ಮ ಮತ್ತು ಮನಸ್ಸಿನ ರಿಚಾರ್ಜಿಂಗ್ ಕೇಂದ್ರಗಳಾಗಬೇಕು. ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಿಗೊಳಿಸಬೇಕು. ಸಮುದಾಯವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುಲು ಮಾರ್ಗದರ್ಶನ ನೀಡಬೇಕು ಎಂದರು.

ಸಮಾಜಸೇವಕಿ ಗೌರಮ್ಮಬಸವೇಗೌಡ ಮಾತನಾಡಿ, ದೇವರ ಮುಂದೆ ಸ್ವಾರ್ಥದ ಬೇಡಿಕೆಗಳನ್ನು ಇಡಬಾರದು. ಸಮಾಜದ ಒಳಿತಿಗೆ ಪ್ರಾರ್ಥಿಸಬೇಕು. ಪರಿಸರ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದರು. ಆಶಾಕಿರಣ ಅಂಧಮಕ್ಕಳ ಶಾಲೆ ವಿದ್ಯಾರ್ಥಿಗಳು ಭಕ್ತಿಗೀತೆ ಹಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ದ್ರಾಕ್ಷಾಯಿಣಿ, ಅಲ್ಲಂಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಗಾಯತ್ರಿ, ಉದ್ಭವ ರಾಮೇಶ್ವರ ದೇವಸ್ಥಾನಜೀರ್ಣೋದ್ಧಾರ ಸೇವಾಸಮಿತಿ ಅಧ್ಯಕ್ಷ ಎ.ಬಿ.ಸುದರ್ಶನ್, ಕಾಫಿ ಬೆಳೆಗಾರ ಕೆ.ಕೆ.ಮನುಕುಮಾರ್,ಎ.ಬಿ.ರವಿಶಂಕರ್, ಬ್ಯಾಗದಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಹಾಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.