ADVERTISEMENT

ಕಾಡಾನೆ ಹಾವಳಿ ತಡೆಗೆ ಟೆಂಟಕಲ್ ಬೇಲಿ ಸಹಕಾರಿ: ಎಸ್.ಡಿ.ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 16:26 IST
Last Updated 21 ಮಾರ್ಚ್ 2025, 16:26 IST
ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸೋಲಾರ್ ಟೆಂಟಕಲ್ ಬೇಲಿ
ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸೋಲಾರ್ ಟೆಂಟಕಲ್ ಬೇಲಿ   

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಶಾಶ್ವತ ಪರಿಹಾರವಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಿದ್ದರೂ ಟೆಂಟಕಲ್ ಬೇಲಿ ನಿರ್ಮಾಣ ಶೀಘ್ರವಾದ ಪರಿಹಾರವಾಗಲಿದೆ ಎಂದು ಕಡಹಿನಬೈಲು ಏತನೀರಾವರಿ ಯೋಜನೆಯ ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಅವರ ಸಲಹೆಯಂತೆ ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯಿಂದ ಟೆಂಟಕಲ್ ಬೇಲಿ ನಿರ್ಮಿಸಿರುವ ಪ್ರದೇಶಕ್ಕೆ ಕಡಹಿನಬೈಲು ಗ್ರಾಮಪಂಚಾಯಿತಿಯ ವಿವಿಧ ಗ್ರಾಮಗಳ ರೈತರ ನಿಯೋಗ ಬುಧವಾರ ಭೇಟಿ ನೀಡಿ ಗ್ರಾಮದ ಮುಖಂಡ ಜಯರಾಮ್ ಅವರ ಬಳಿ ಚರ್ಚಿಸಲಾಯಿತು ಎಂದರು.

ತತ್ಕೋಳ ಮೀಸಲು ಅರಣ್ಯವ್ಯಾಪ್ತಿಯಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಇಲಾಖೆಯವರು 2018ರಲ್ಲಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಿದ್ದು, ಸಮರ್ಪಕ ನಿರ್ವಹಣೆ ಮಾಡಿಕೊಂಡು ಕಾಡಾನೆಗಳು ಜನವಸತಿ ಪ್ರದೇಶಗಳಿಗೆ, ತೋಟಗಳಿಗೆ ಬರದಂತೆ ತಡೆಗಟ್ಟಲು ಯಶಸ್ವಿಯಾಗಿದ್ದಾರೆ. 18 ಕಿ.ಮೀ ಟೆಂಟಕಲ್ ಸೋಲಾರ್ ಬೇಲಿ ನಿರ್ಮಿಸಿದ್ದು ಪ್ರತಿ 2ಕಿ.ಮೀಗೆ ಒಂದರಂತೆ ಬ್ಯಾಟರಿ ಇಟ್ಟಿದ್ದು ಸೌರಶಕ್ತಿಯ ಮೂಲಕ ಚಾರ್ಜ್ ಆಗುತ್ತದೆ ಎಂದರು.

ADVERTISEMENT

ಆನೆ ದಾಟದಂತೆ ಕಂದಕ ಮಾಡಿ ಸಿಮೆಂಟ್ ಕಂಬಗಳನ್ನು ಅಳವಡಿಸಿ ಬೇಲಿ ನಿರ್ಮಿಸಿದ್ದರೆ ಕಂಬಗಳನ್ನು ಮುಟ್ಟಿದ್ದರೂ ಶಾಕ್ ಹೊಡೆಯುತ್ತದೆ. ಬೇಲಿಯ ಸಮೀಪ ನಿರ್ವಹಣೆಗೆ ಓಡಾಡಲು ಅನುಕೂಲವಾಗುವಂತೆ ಕಚ್ಚಾರಸ್ತೆ ನಿರ್ಮಿಸಲಾಗಿದೆ. ಕಳೆ ಬೆಳೆಯದಂತೆ ಸೂಕ್ತ ನಿರ್ವಹಣೆ ಮಾಡಲಾಗಿದೆ. ಇದನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಿದ್ದಾರೆ. ವೈಜ್ಞಾನಿಕವಾಗಿ ನಿರ್ವಹಣೆ ಮಾಡಿರುವುದರಿಂದ ಮರದ ಕೊಂಬೆಗಳು ಬಿದ್ದರೂ ನಿಗದಿತ ಸ್ಥಳದಲ್ಲಿ ಮಾತ್ರ ತಂತಿ ತುಂಡಾಗುತ್ತದೆ. ಉಳಿದೆಡೆ ಸಮಸ್ಯೆ ಆಗುವುದಿಲ್ಲ. ಕೆಲವೇ ಗಂಟೆಗಳಲ್ಲಿ ದುರಸ್ತಿ ಮಾಡಬಹುದು. ಮಧ್ಯದಲ್ಲಿ ಗ್ರಾಮಗಳಿಗೆ ಹೋಗುವ ರಸ್ತೆಯಿದ್ದರೆ ಅಲ್ಲೂ ಟೆಂಟಕಲ್ ಬೇಲಿ ನಿರ್ಮಿಸಿದ್ದು ವಾಹನದಲ್ಲಿ ರಬ್ಬರ್ ಟೈರ್ ಇರುವುದರಿಂದ ವಾಹನಗಳಿಗೆ ಬೇಲಿಯ ತಂತಿ ಸ್ಪರ್ಶಿಸಿದರೂ ವಿದ್ಯುತ್ ಆಘಾತ ಉಂಟಾಗುವುದಿಲ್ಲ ಎಂದರು.

ಟೆಂಟಕಲ್ ಬೇಲಿ ನಿರ್ಮಿಸಿರುವ 20 ಅಡಿ ದೂರದವರೆಗೂ ಯಾವುದೇ ಆನೆಗಳು ಬರುವುದಿಲ್ಲ. ತತ್ಕೋಳ ಅರಣ್ಯ ವ್ಯಾಪ್ತಿಯ ಕೆಂಜಿಗೆ, ಬಾಳೆಹಳ್ಳ, ಗುಡ್ಡದ ಎಸ್ಟೇಟ್, ಬೆಳಗೊಳ, ಮಾವಿನಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಹಾವಳಿ ತಡೆಗಟ್ಟಲು ಸಾಧ್ಯವಾಗಿದೆ ಎಂದರು.

ಪ್ರಸ್ತುತ ತಾಲ್ಲೂಕಿನ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಪ್ರಾಣ ಹಾನಿ ಮತ್ತು ಬೆಳೆಹಾನಿ ತಡೆಗಟ್ಟಲು ತಾಲ್ಲೂಕಿನ ಮಾರಿದಿಬ್ಬದಿಂದ ಜೈಲ್ ರಸ್ತೆಯ ಗಡಿಗ್ರಾಮ, ಕೂಸ್ಗಲ್‌ನ ಗಡಿ ಗ್ರಾಮವಾದ ಹೆನ್ನಂಗಿ ಬೆಳ್ಳಂಗಿ ಗ್ರಾಮದವರೆಗೆ 80 ಕಿ.ಮೀ ಟೆಂಟಕಲ್ ಬೇಲಿಯನ್ನು ಅಂದಾಜು ₹7ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಬಹುದು. ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ಮಾಡಲು 1ಕಿ.ಮೀ ₹1ಕೋಟಿ ವೆಚ್ಚ ತಗಲುತ್ತದೆ. ಇದು ದೀರ್ಘಾವಧಿ ಪ್ರಕ್ರಿಯೆಯಾಗಿದೆ. ಈ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ರೈತ ರಂಜು ಟಿ.ಏಲಿಯಾಸ್ ಮಾಹಿತಿ ನೀಡಿ, ತತ್ಕೋಳ ಮೀಸಲು ಅರಣ್ಯದಲ್ಲಿ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣ ಮಾಡಿ ಗ್ರಾಮದ ಜನರಿಗೆ ರಕ್ಷಣೆ, ರೈತರು ಬೆಳೆದ ತೋಟದ ರಕ್ಷಣೆ ಜತೆಗೆ ಆನೆಗಳು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಓಡಾಡಲು ಆನೆಕಾರಿಡಾರ್ ನಿರ್ಮಿಸಿದ್ದಾರೆ. ಆನೆಗಳಿಗೆ ಅರಣ್ಯದೊಳಗೆ ಆಹಾರ ಲಭಿಸುವಂತಾಗಲು ವಿವಿಧ ಹಣ್ಣಿನ ಮರ, ಗಿಡಗಳನ್ನು ಬೆಳೆಸಲಾಗಿದೆ. ಹಲವು ಕಡೆ ಕೆರೆಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ತುರ್ತಾಗಿ ಆನೆ ಹಾವಳಿ ತಡೆಗಟ್ಟಲು ಸೋಲಾರ್ ಟೆಂಟಕಲ್ ಬೇಲಿ ನಿರ್ಮಿಸಲು ಶಾಸಕರ ಮೂಲಕ ಅರಣ್ಯ ಇಲಾಖೆಗೆ ಒತ್ತಾಯಿಸಲಾಗುವುದು ಎಂದರು.

ಗ್ರಾಮಸ್ಥರಾದ ಗಾಂಧಿಗ್ರಾಮ ನಾಗರಾಜು, ಸುಂದರೇಶ್, ಎಂ.ಮಹೇಶ್, ನಿವೃತ್ತ ಸೈನಿಕ ಎಂ.ಕೆ.ಎಲ್ದೋಸ್ ಭಾಗವಹಿಸಿದ್ದರು.

ಮೂಡಿಗೆರೆ ತಾಲ್ಲೂಕು ತತ್ಕೋಳ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸೋಲಾರ್ ಟೆಂಟಕಲ್ ಬೇಲಿ
ಆನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಬೇಕು ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಆನೆಗಳು ಇರುವ ಗ್ರಾಮದಲ್ಲಿ ಒಂದು ದಿನ ಜೀವನ ನಡೆಸಿ ಹೇಳಿಕೆ ನೀಡಲಿ
ಕೆ.ಎನ್.ನಾಗರಾಜು ಗಾಂಧಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.