ಚಿಕ್ಕಮಗಳೂರು: ನಗರದ ವಿವಿಧೆಡೆ ತಳ್ಳುಗಾಡಿ ಅಂಗಡಿಗಳವರಿಂದ (ಪಾನಿಪೂರಿ, ಗೂಬಿಮಂಚೂರಿ, ವಡೆ...) ನಿಗದಿಗಿಂತ ಹೆಚ್ಚು ನೆಲಬಾಡಿಗೆ ವಸೂಲಿ ಮಾಡಿ ಸುಲಿಗೆ ಮಾಡಲಾಗುತ್ತಿದೆ.
ಒಂದು ಗಾಡಿಗೆ ದಿನಕ್ಕೆ ₹ 10 ನೆಲಬಾಡಿಗೆ ನಿಗದಿ ಮಾಡಲಾಗಿದೆ. ಆದರೆ, ಗಾಡಿಗೆ ₹ 20 ವಸೂಲಿ ಮಾಡಲಾಗುತ್ತಿದೆ. ಕರ ವಸೂಲಿಗಾರರು ಒಂದು ಅಂಗಡಿ ₹ 10ರ ಎರಡು ರಸೀತಿ ನೀಡಿ ₹ 20 ಪೀಕುತ್ತಾರೆ.
ಮಲ್ಲಂದೂರು ರಸ್ತೆ, ಬೇಲೂರು ರಸ್ತೆ, ವಿಜಯಪುರದ ಗಣಪತಿ ಪೆಂಡಾಲ್ ಜಾಗ ಸಹಿತ ವಿವಿಧೆಡೆಗಳಲ್ಲಿ ತಳ್ಳುಗಾಡಿಗಳಲ್ಲಿ ಪಾನಿಪೂರಿ, ಗೂಬಿ ಮಂಚೂರಿ, ಎಗ್ ರೈಸ್, ವಡೆ ಇತ್ಯಾದಿ ವ್ಯಾಪಾರ ನಡೆಯುತ್ತದೆ. ನೂರಾರು ಮಂದಿಗೆ ತಳ್ಳುಗಾಡಿ ವ್ಯಾಪಾರವೇ ದುಡಿಮೆ ದಾರಿ. ನೆಲಬಾಡಿಗೆ ಕಟ್ಟದಿದ್ದರೆ ‘ಸಂಕಷ್ಟ’ ತಪ್ಪಿದ್ದಲ್ಲ. ವ್ಯಾಪಾರಕ್ಕೇ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ.
‘ಕೆಲ ಅಂಗಡಿಗಳಿಗೆ ನೆಲಬಾಡಿಗೆ ₹30, ₹ 40 ವಸೂಲಿ ಮಾಡುತ್ತಾರೆ. ₹ 10 ಎಂದು ಮುದ್ರಿಸಿರುವ ಮೂರು, ನಾಲ್ಕು ರಸೀತಿಗಳನ್ನು ನೀಡುತ್ತಾರೆ. ಜಾಸ್ತಿ ಯಾಕೆ ವಸೂಲಿ ಮಾಡುತ್ತೀರಿ ಎಂದು ಕೇಳಿದರೆ ಕಿರಿಕಿರಿ ಮಾಡುತ್ತಾರೆ’ ಎಂದು ಮಲ್ಲಂದೂರು ರಸ್ತೆಯ ಕಬಾಬ್ ಗೂಡಂಗಡಿ ವ್ಯಾಪಾರಿಯೊಬ್ಬರು ಗೋಳು ತೋಡಿಕೊಂಡರು.
‘ನೆಲಬಾಡಿಗೆ ಜಾಸ್ತಿ ವಸೂಲಿ ಮಾಡಲು ಶುರು ಮಾಡಿ ಹಲವು ತಿಂಗಳಾಗಿದೆ. ಪ್ರಶ್ನಿಸಿದರೆ ಟೆಂಡರ್ ಜಾಸ್ತಿಯಾಗಿದೆ ಎಂದು ಜೋರು ಮಾಡುತ್ತಾರೆ. ಹಗಲು ಈ ವಿಚಾರವನ್ನು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ವಿಜಯಪುರದ ಗಣಪತಿ ಪೆಂಡಾಲ್ ಅಂಗಳದ ಪಾನಿಪೂರಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.
ರಸೀತಿಯಲ್ಲಿ ಸೀಲು, ಸಹಿ ಹಾಕಬೇಕು ಎಂಬ ನಿಯಮ ಪಾಲಿಸಲ್ಲ. ನಿಗದಿಗಿಂತ ದುಪ್ಪಟ್ಟು ವಸೂಲಿ ಮಾಡುವ ಪರಿಪಾಠ ಬೆಳೆದಿದೆ. ತಳ್ಳುಗಾಡಿಗಳವರಿಂದ ನೆಲಬಾಡಿಗೆ ವಸೂಲಿಗೆ ಸಂಬಂಧಿಸಿದಂತೆ ನಗರಸಭೆಯವರು ನಿಗಾ ಇಟ್ಟಂತಿಲ್ಲ.
‘ಒಂದು ತಳ್ಳಗಾಡಿಗೆ ₹ 10 ನೆಲಬಾಡಿಗೆ ವಸೂಲಿ ಮಾಡಬೇಕು ಎಂದು ಟೆಂಡರ್‌ನಲ್ಲಿ ಷರತ್ತು ವಿಧಿಸಲಾಗಿದೆ. ರಸೀತಿಯಲ್ಲಿ ಮೊಹರು, ಹಣ ಪಡೆದವರು ಸಹಿ ಹಾಕಬೇಕು. ನಿಯಮ ಉಲ್ಲಂಘಿಸಿದರೆ ನೋಟಿಸ್ ನೀಡಿ ಕ್ರಮ ಜರುಗಿಸುತ್ತೇವೆ’ ನಗರಸಭೆ ಕಂದಾಯ ಅಧಿಕಾರಿ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.