ADVERTISEMENT

ಶೃಂಗೇರಿ ವಿವಾದ: ಆರೋಪಿಯ ಬಂಧನ, ತಪ್ಪೊಪ್ಪಿಗೆ

ಒಬ್ಬನ ಬಂಧನ: ಎಸ್ಪಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 12:20 IST
Last Updated 14 ಆಗಸ್ಟ್ 2020, 12:20 IST
   

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಶಂಕರಾಚಾರ್ಯ ಪ್ರತಿಮೆ ಇರುವ ಮಂಟಪದ ಗೋಪುರದ ಮೇಲೆ ಗುರುವಾರ ಕಂಡುಬಂದಿದ್ದ ಬಟ್ಟೆ ಈದ್‌ ಮಿಲಾದ್‌ ಬ್ಯಾನರ್‌, ಅದು ಯಾವುದೇ ಪಕ್ಷ, ಸಂಘಟನೆಯ ಬಾವುಟವಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲಿಂದ್‌ (28) ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಇಲ್ಲಿ ಶುಕ್ರವಾರ ತಿಳಿಸಿದರು.

ಸಿ.ಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಸುಳಿವು ಆಧರಿಸಿ ಆರೋಪಿಯನ್ನು ವಿಶೇಷ ತಂಡ ಪತ್ತೆ ಮಾಡಿದೆ. ಮಿಲಿಂದ್‌ ಮದ್ಯ ವ್ಯಸನಿಯಾಗಿದ್ದು, ಕೃತ್ಯ ಎಸಗಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇದೇ 12ರಂದು ರಾತ್ರಿ ಕೃತ್ಯ ಎಸಗಿದ್ದಾನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶೃಂಗೇರಿಯ ಜಾಮಿಯಾ ಮಸೀದಿಯಲ್ಲಿದ್ದ ಈದ್‌ ಮಿಲಾದ್‌ ಬ್ಯಾನರ್‌ ಅನ್ನು ಮಳೆಯಿಂದ ಮೈಒದ್ದೆಯಾಗದಂತೆ ಮುಚ್ಚಿಕೊಳ್ಳಲು ರಕ್ಷಣೆಗೆ ಒಯ್ದಿದ್ದೆ. ಬ್ಯಾನರ್‌ ದೇವರಿಗೆ ಸಂಬಂಧಿಸಿದ್ದು ಎಂದು ಗೊತ್ತಾದ ನಂತರ ಅದನ್ನು ದೇವರಿಗೆ ಕೊಡಲು ಯೋಚಿಸಿ ಶಂಕರಾಚಾರ್ಯ ಪ್ರತಿಮೆ ಇರುವ ಮಂಟಪದ ಗೋಪುರದ ಮೇಲಕ್ಕೆ ಹಾಕಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ತಿಳಿಸಿದರು.

ADVERTISEMENT

ಆರೋಪಿಗೆ ಯಾವುದೇ ಪಕ್ಷ, ಸಂಘಟನೆ ನಂಟು ಇಲ್ಲ. ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ. ಉದ್ದೇಶಪೂರ್ವಕವಾಗಿ ಎಸಗಿದಂತೆ ಕಂಡುಬಂದಿಲ್ಲ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.