ADVERTISEMENT

ಆಲ್ದೂರು | ‘ಭಾಷೆ ಉಳಿದಿರುವುದು ಜನಸಾಮಾನ್ಯರಿಂದ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 5:42 IST
Last Updated 2 ಡಿಸೆಂಬರ್ 2025, 5:42 IST
ಪಟ್ಟಣದ ಅಬ್ಬಾಸಿಯ ಬಯಲು ರಂಗ ಮಂದಿರದಲ್ಲಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು
ಪಟ್ಟಣದ ಅಬ್ಬಾಸಿಯ ಬಯಲು ರಂಗ ಮಂದಿರದಲ್ಲಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು   

ಆಲ್ದೂರು: ಪಟ್ಟಣದ ಅಬ್ಬಾಸಿಯ ಬಯಲು ರಂಗಮಂದಿರದಲ್ಲಿ ಗೆಳೆಯರ ಬಳಗ ಆಚೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಸಮಾರೋಪ ಭಾನುವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕಮಗಳೂರು ಜಿಲ್ಲಾ ಆಟೊ ಸಂಘದ ಅಧ್ಯಕ್ಷ ಅನಿಲ್ ಕುಮಾರ್, 1996ರಲ್ಲಿ 13 ಆಟೋಗಳಿಂದ ಪ್ರಾರಂಭವಾದ ಸಂಘವು ಪ್ರಸ್ತುತ 200ಕ್ಕೂ ಹೆಚ್ಚಿನ ಚಾಲಕ ಮಿತ್ರರನ್ನು ಸದಸ್ಯರಾಗಿ ಹೊಂದಿದೆ. ನಾಡು, ನುಡಿ, ಗಡಿ ವಿಚಾರಗಳಿಗೆ ಧಕ್ಕೆ ಬಂದಾಗ ಕನ್ನಡದ ಅಸ್ಮಿತೆಗಾಗಿ ಹೋರಾಟಕ್ಕೆ ಧುಮುಕುವ ಮೊದಲಿಗರು ಆಟೊ ಚಾಲಕರು. ಅವರು ಮಾಡುವ ಸಮಾಜಮುಖಿ ಕೆಲಸಗಳು ಮುಖ್ಯವಾಹಿನಿಗೆ ಬರುವುದಿಲ್ಲ. ಪಟ್ಟಣದ ಸರ್ಕಾರಿ ಶಾಲೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕ್ ನಿರ್ಮಿಸಿ ಕೊಡುಗೆ ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಆರು ಹಾಸಿಗೆ ವ್ಯವಸ್ಥೆ ಉಚಿತವಾಗಿ ಮಾಡಿದ್ದಾರೆ ಎಂದರು.

ಹಾಸನದ ಜಾನಪದ ವಿದ್ವಾಂಸ ಮಲ್ಲೇಶ್ ಗೌಡ ಮಾತನಾಡಿ, ಭಾಷೆ ಉಳಿದಿರುವುದು ಮಹಾಕವಿಗಳಿಂದಲ್ಲ. ಬದಲಿಗೆ ಸಾಮಾನ್ಯ ಜನರಿಂದ. ಜನಸಾಮಾನ್ಯರ ಭಾಷೆಯನ್ನು ಬಳಸಿ ಕವಿಗಳು ಮಹಾಕವಿಗಳಾಗಿದ್ದಾರೆ. ಕವಿಗಳಿಗಿಂತಲೂ ಬಹುಮುಖ್ಯವಾದವರು ಸಾಮಾನ್ಯ ಜನರು. ಭಾಷೆ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ನಮ್ಮಿಂದಲೇ ಅದರ ಬೆಳವಣಿಗೆ ಕುಂಠಿತವಾಗುತ್ತಿರುವುದು ನಮ್ಮ ಮನೆಗಳಿಂದಲೇ. ಎಲ್ಲಾ ಕಡೆ ಇಂಗ್ಲಿಷ್‌ ಭಾಷೆಯ ಅಧಿಪತ್ಯವೇ ಹೆಚ್ಚಾಗಿದೆ ಎಂದರು.

ADVERTISEMENT

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಗ್ರಾಮೀಣ ಜನರ ಬದುಕಿನ ಕಣ ಕಣದಲ್ಲಿ ಕನ್ನಡ ಸಮ್ಮಿಳಿತಗೊಂಡಿದೆ. ಪರಭಾಷೆಯನ್ನು ಗೌರವಿಸೋಣ. ಮಾತೃಭಾಷೆಯನ್ನು ಪ್ರೀತಿಸೋಣ ಎಂದರು.

 ಸಂಘದ ಅಧ್ಯಕ್ಷ ಡಿಡಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ನೂರ್ ಮಹಮ್ಮದ್ ಸ್ವಾಗತಿಸಿದರು. ನಾಗೇಶ್ ದೋಣಗುಡಿಗೆ ನಿರೂಪಿಸಿದರು.

ಕ್ರೀಡೆ ಚಟುವಟಿಕೆ ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷ ಭರತ್, ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು, ಆಟೊ ಸಂಘದ ಉಪಾಧ್ಯಕ್ಷ ಯಶೋದರ, ಗ್ರಾ.ಪಂ.ಮಾಜಿ ಸದಸ್ಯ ಮೈದಿನ್ ಕುಟ್ಟಿ, ಕಾಫಿ ಬೆಳೆಗಾರ ತೌಸಿಫ್ ಅಲಿ, ಬ್ಯಾರಿ ಒಕ್ಕೂಟದ ಹೋಬಳಿ ಅಧ್ಯಕ್ಷ ಭದ್ರುದ್ದೀನ್, ಬ್ಲಾಕ್ ಅಲ್ಪಸಂಖ್ಯಾತರ ಅಧ್ಯಕ್ಷ ಅಶ್ರಫ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾರಾಯಣ ಆಚಾರ್ಯ, ಭೀಮ್‌ ಆರ್ಮಿ ಹೋಬಳಿ ಅಧ್ಯಕ್ಷ ಸುರೇಶ್, ದುರ್ಗಿ ಸಮಿತಿ ಅಧ್ಯಕ್ಷ ಅನೂಪ್, ಜಯ ಕರ್ನಾಟಕ ಸಂಘದ ಅಧ್ಯಕ್ಷ ಮಂಜುನಾಥ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಭವ್ಯ ನಟೇಶ್, ಆಟೊ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಮಲ್ಲೇಶ್‌ಗೌಡ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.