ಮೂಡಿಗೆರೆ: ತಾಲ್ಲೂಕಿನಾದ್ಯಂತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯು ಸೋಮವಾರವೂ ಮುಂದುವರಿದಿದೆ.
ಭಾನುವಾರ ತಡರಾತ್ರಿಯಿಂದ ಎಡಬಿಡದೆ ಸುರಿದ ಮಳೆ, ಸೋಮವಾರ ಬೆಳಿಗ್ಗೆ 10 ಗಂಟೆವರೆಗೂ ನಿರಂತರವಾಗಿ ಸುರಿಯಿತು. ಮಧ್ಯಾಹ್ನದ ಕೆಲಕಾಲ ಬಿಡುವು ನೀಡಿದ್ದ ಮಳೆ, ಸಂಜೆಯ ಬಳಿಕ ಧಾರಾಕಾರವಾಗಿ ಸುರಿಯಿತು.
ಮಳೆಯಿಂದಾಗಿ ಬಹುತೇಕ ಕಾಫಿತೋಟ, ಭತ್ತದ ಗದ್ದೆಗಳಲ್ಲಿ ಕೆಲಸಕ್ಕೆ ರಜೆ ಘೋಷಿಸಲಾಗಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದವು. ಹೇಮಾವತಿ ನದಿಯು ಉಕ್ಕಿ ಹರಿಯುತ್ತಿದ್ದು, ಉಗ್ಗೆಹಳ್ಳಿ ಗ್ರಾಮದ ಬಳಿ ಗದ್ದೆ ಬಯಲಿಗೆ ನುಗ್ಗಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ತಾಲ್ಲೂಕಿನ ಬಾಳೂರು ಗ್ರಾಮದಲ್ಲಿ ಕೂಲಿ ಲೈನ್ ಮೇಲೆ ಮರ ಬಿದ್ದ ಕಾರಣ, ಲೈನಿನಲ್ಲಿದ್ದ ಸುನಂದಾ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫಲ್ಗುಣಿ ಗ್ರಾಮದಲ್ಲಿ ಗೀತಾ ಚಂದ್ರಶೇಖರ್ ಎಂಬುವರ ಮನೆಯು ಕುಸಿದಿದ್ದು, ಹಾನಿ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.