ADVERTISEMENT

ಐಟಿ ದಾಳಿಗೂ ಚುನಾವಣೆಗೂ ಸಂಬಂಧ ಇಲ್ಲ: ಶೋಭಾ

​ಪ್ರಜಾವಾಣಿ ವಾರ್ತೆ
Published 2 ಮೇ 2019, 16:18 IST
Last Updated 2 ಮೇ 2019, 16:18 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಚಿಕ್ಕಮಗಳೂರು: ‘ರಾಜ್ಯದ ವಿವಿಧೆಡೆ ಐಟಿ ಅಧಿಕಾರಿಗಳು ನಡೆಸಿರುವ ದಾಳಿಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದ ಬೇರೆ ಬೇರೆ ಸಂಸ್ಥೆಗಳು ಅವರದೇ ಆದ ಮಾಹಿತಿ ಆಧರಿಸಿ ತನಿಖೆ ಮಾಡುತ್ತವೆ. ರಾಜ್ಯದಲ್ಲಿ ಸರ್ಕಾರದ ವ್ಯಕ್ತಿಗಳಿಂದ ದೊಡ್ಡ ಪ್ರಮಾಣದ ಹಣ ಚಲಾವಣೆ ಮಾಹಿತಿ ಸಿಕ್ಕಿರಬಹುದು. ಅಧಿಕಾರಿಗಳು ದಾಳಿ ನಡೆಸಿರಬಹುದು’ ಎಂದು ಉತ್ತರಿಸಿದರು.

‘ದಾಳಿಗೂ ಚುನಾವಣೆಗೂ ಲಿಂಕ್‌ ಮಾಡುವಂಥವರು ಈ ಚುನಾವಣೆಗೆ ಹೆದರಿದ್ದಾರೆ ಎಂದು ಅರ್ಥ. ಹೀಗಾಗಿ, ಅವರು ಅತಂಕ ವ್ಯಕ್ತಪಡಿಸಿದ್ದಾರೆ’ ಎಂದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ‘ಬಿಜೆಪಿಯವರ ಮೇಲೂ ಈ ಹಿಂದೆ ಐಟಿ ದಾಳಿ ನಡೆದಿತ್ತು. ಐಟಿ ದಾಳಿಗೆ ರಾಜಕಾರಣದ ಸಂಬಂಧ ಕಲ್ಪಿಸುವುದು ಸಣ್ಣತನ. ಪ್ರಾಮಾಣಿಕವಾಗಿ ವ್ಯವಹಾರ ಮಾಡುವ ಕಂಪನಿ, ಜನರಿಗೆ ದಾಳಿಯಿಂದ ಯಾವ ತೊಂದರೆಯಾಗುವುದಿಲ್ಲ. ತೆರಿಗೆ ವಂಚಿಸಿದ್ದರೆ ಕಪ್ಪುಹಣ ಇದ್ದರೆ ತೊಂದರೆಯಾಗುತ್ತದೆ’ ಎಂದರು.

‘ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ಬೆಂಬಲಿತ ಗುತ್ತಿಗೆದಾರರ ಮನೆ ಮೇಲೆ ಐಟಿ ದಾಳಿ ಮಾಡಿದರೆ ರಾಜಕಾರಣ ಎಂದು ಬಣ್ಣಕಟ್ಟುತ್ತಾರೆ. ಪಕ್ಷ ಉದ್ದೇಶ ಇಟ್ಟುಕೊಂಡು ಐಟಿ ದಾಳಿ ನಡೆಯಲ್ಲ, ಅಧಿಕಾರಿಗಳಿಗೆ ಸಿಕ್ಕಿದ ಮಾಹಿತಿ ಆಧರಿಸಿ ನಡೆಯುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಐಟಿ ದಾಳಿಗೂ ಬಿಜೆಪಿಗೂ ಸಂಬಂಧ ಇಲ್ಲ. ಆದಾಯ ತೆರಿಗೆ ಇಲಾಖೆ ಬಿಜೆಪಿಯ ವಿಂಗ್‌ ಅಲ್ಲ. ಅದು ಸರ್ಕಾರದ ವಿಂಗ್‌. ಸರ್ಕಾರ ಯಾವುದಿದೆ ಎಂಬುದರ ಮೇಲೆ ಐಟಿ ಅಧಿಕಾರಿಗಳು ಕಾರ್ಯನಿರ್ವಹಿಸಲ್ಲ. ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇರುತ್ತವೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟುನೋಡಿಕೊಳ್ಳುವ ಕೆಲಸ ಮಾಡಬಾರದು’ ಎಂದು ಪ್ರತಿಕ್ರಿಯಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.