ಹುಲಿ (ಸಂಗ್ರಹ ಚಿತ್ರ)
ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಹುಲಿ ದಾಳಿ ನಡೆಸಿ, ನಾಲ್ಕು ಹಸುಗಳನ್ನು ಪರಚಿ ಗಾಯಗೊಳಿಸಿದೆ. ಹುಲಿ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗೋಣಿಬೀಡು ಸಮೀಪದ ದೇವನಾರಿ ಕಾಫಿ ಎಸ್ಟೇಟ್, ಕಲ್ಲುಗುಡ್ಡ ಸುತ್ತಲಿನ ಪ್ರದೇಶಗಳಲ್ಲಿ ಹುಲಿ ಸಂಚಾರ ಕಂಡು ಬಂದಿದೆ. ಕಲ್ಲುಗುಡ್ಡ, ಹುಲಿಹಂಡ್ಲು, ಕಸ್ಕೆಬೈಲ್ ಗ್ರಾಮಗಳ ಸುತ್ತ ನಾಲ್ಕು ದಿನಗಳಿಂದಲೂ ಹುಲಿ ಸಂಚಾರ ನಡೆಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಬುಧವಾರ ಕಲ್ಲುಗುಡ್ಡ ಗ್ರಾಮದಲ್ಲಿ ಹಸು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಲ್ಲುಗುಡ್ಡ, ಹುಲಿಹಂಡ್ಲು, ಕಸ್ಕೆಬೈಲ್ ಗ್ರಾಮಗಳ ಸುತ್ತ ಹುಲಿ ಸಂಚರಿಸುತ್ತಿದ್ದು, ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆಯು ಸೂಚನೆ ನೀಡಿದೆ.
ಒಂದು ತಿಂಗಳ ಹಿಂದೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿದ್ದವು. ಆನೆದಾಳಿಯ ಬೆನ್ನಲ್ಲೇ ಇದೀಗ ಹುಲಿ ದಾಳಿ ನಡೆಸುತ್ತಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.