ADVERTISEMENT

ಶುಲ್ಕ ಸಂಗ್ರಹ ಆಯವ್ಯಯ; ತನಿಖೆಗೆ ಒತ್ತಾಯ

ಕೈಮರ ಚೆಕ್‌ಪೋಸ್ಟ್‌: ಪ್ರವಾಸಿ ವಾಹನಗಳಿಂದ ಶುಲ್ಕ ವಸೂಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 11:25 IST
Last Updated 9 ಅಕ್ಟೋಬರ್ 2019, 11:25 IST
ಎಸ್‌.ಎಲ್‌.ಭೋಜೇಗೌಡ
ಎಸ್‌.ಎಲ್‌.ಭೋಜೇಗೌಡ   

ಚಿಕ್ಕಮಗಳೂರು: ‘ಗಿರಿಶ್ರೇಣಿ ತಪ್ಪಲಿನ ಕೈಮರ ಚೆಕ್‌ಪೋಸ್ಟ್‌ನಲ್ಲಿ ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿ ಹೆಸರಿನಲ್ಲಿ ಪ್ರವಾಸಿ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸಂಬಂಧಿಸಿದಂತೆ ಲೆಕ್ಕಬುಕ್ಕು ಇಟ್ಟಿಲ್ಲ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ ಇಲ್ಲಿ ಬುಧವಾರ ಒತ್ತಾಯಿಸಿದರು.

‘ಗಿರಿಶ್ರೇಣಿಗೆ ಸಹಸ್ರಾರು ಪ್ರವಾಸಿ ವಾಹನಗಳು ನಿತ್ಯ ಬಂದುಹೋಗುತ್ತವೆ. ಪ್ರವಾಸಿ ವಾಹನಗಳಿಂದ ಶುಲ್ಕ ವಸೂಲಿ ಮಾಡಿ ಜಿಲ್ಲಾಡಳಿತ (ಮುಜರಾಯಿ), ಚಂದ್ರದ್ರೋಣ ಗ್ರಾಮ ಅರಣ್ಯ ಸಮಿತಿ ಹೆಸರಿರುವ ರಸೀತಿ ನೀಡಲಾಗುತ್ತಿದೆ. ರಸೀತಿಯಲ್ಲಿ ಜಿಲ್ಲಾಡಳಿತದ ಮೊಹರು ಇಲ್ಲ. ರಸೀತಿ ಪುಸ್ತಕ ಮುದ್ರಣಕ್ಕೆ ಇಂಡೆಂಟ್‌ ಹಾಕಿರುವ ದಾಖಲೆ ಇಲ್ಲ. ಹಗಲು ದರೋಡೆ ನಡೆಯುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಅರಣ್ಯ ಸಮಿತಿ ರಚಿಸಿದ್ದು ಯಾರು? ಸಮಿತಿಯ ಅಧ್ಯಕ್ಷರು, ಸದಸ್ಯರು ಯಾರು? ಎಂಬ ಬಗ್ಗೆಯೂ ಮಾಹಿತಿ ಇಲ್ಲ. ರಸೀತಿ ಪುಸ್ತಕಗಳ ಮದ್ರಣ, ಈ ಶುಲ್ಕ ವಸೂಲಿ ಬಾಬ್ತಿನಿಂದ ಎಷ್ಟು ಹಣ ಸಂಗ್ರಹವಾಗುತ್ತದೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೇ ಮಾಹಿತಿ ಇಲ್ಲ’ ಎಂದರು.

ADVERTISEMENT

‘ಪ್ರವಾಸಿಗರಿಗೆ ಶುಲ್ಕ ವಸೂಲಿ ತಾಪತ್ರಯವಾಗಿ ಪರಿಣಮಿಸಿದೆ. ಈ ಶುಲ್ಕ ವಸೂಲಿ ಮಾಡುವುದನ್ನೇ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಅರಣ್ಯಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಮಾಹಿತಿ ಪಡೆದು ಐದು ದಿನಗಳಲ್ಲಿ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಎಲ್ಲ ವಿವರ ಸಂಗ್ರಹಿಸಿ ಸತ್ಯಾಂಶ ತಿಳಿಸಬೇಕು’ ಎಂದು ಒತ್ತಾಯಿಸಿದರು.

‘3 ದಿನ ಅಧಿವೇಶನ ಕಣ್ಣೊರೆಸುವ ತಂತ್ರ’

‘ರಾಜ್ಯ ಸರ್ಕಾರವು ಮೂರು ದಿನ ಅಧಿವೇಶನ ಕರೆದಿರುವುದು ಕಣ್ಣೊರೆಸುವ ತಂತ್ರ. ರಾಜ್ಯದಲ್ಲಿನ ಅತಿವೃಷ್ಟಿ ಸಮಸ್ಯೆಗಳ ಚರ್ಚೆಗೆ ಮೂರು ದಿನ ಸಾಲಲ್ಲ’ ಎಂದು ಭೋಜೇಗೌಡ ಟೀಕಿಸಿದರು.

ನೆರೆ ಸಮಸ್ಯೆಗಳ ಬಗ್ಗೆ ಚರ್ಚೆ, ಪರಿಹಾರ ಒದಗಿಸುವುದು ಆಡಳಿತ ಪಕ್ಷದ ಉದ್ದೇಶವಾಗಿದ್ದರೆ ಅಧಿವೇಶನಕ್ಕೆ 10 ದಿನ ನಿಗದಿಪಡಿಸಬೇಕಿತ್ತು. ಬೆಳಗಾವಿಯಲ್ಲೇ ಅಧಿವೇಶ ಮಾಡಬೇಕಿತ್ತು ಎಂದು ಪ್ರತಿಕ್ರಿಯಿಸಿದರು.

‘75 ವರ್ಷ ಆದವರು ನಿವೃತ್ತಿಯಾಗಬೇಕು ಎಂಬುದು ಬಿಜೆಪಿ ಪಾಲಿಸಿ ಇರಬಹುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ರಾಜೀನಾಮೆ ಕೇಳಲಾಗಿದೆ ಎಂಬುದೆಲ್ಲ ಬಿಜೆಪಿಯ ಆಂತರಿಕ ವಿಚಾರ. ಈ ಬಗ್ಗೆ ಪ್ರತಿಕ್ರಿಯಿಸಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.