ADVERTISEMENT

ಇಳಿದು ಹೋದವರು ಉಳಿದರು

ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶ: ಮೂವರ ಸಾವು

ಅನಿಲ್ ಮೊಂತೆರೊ
Published 8 ಸೆಪ್ಟೆಂಬರ್ 2022, 8:34 IST
Last Updated 8 ಸೆಪ್ಟೆಂಬರ್ 2022, 8:34 IST
ರಚನಾ(26)
ರಚನಾ(26)   

ಕೊಟ್ಟಿಗೆಹಾರ: ಇಲ್ಲಿನ ಬಿ.ಹೊಸಹಳ್ಳಿಯಲ್ಲಿ ಮಂಗಳವಾರ ರಾತ್ರಿ ವಿದ್ಯುತ್ ಅವಘಡ ಸಂಭವಿಸಿ ಮೂವರು ಮೃತಪಟ್ಟು, ಮೂವರು ಅಸ್ವಸ್ಥಗೊಂಡಿದ್ದ ಟ್ರ್ಯಾಕ್ಟರ್‌ನಲ್ಲಿ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದು, ಘಟನೆಗೂ ಸ್ವಲ್ಪ ಮೊದಲು ಇಳಿದಿದ್ದ ಕಾರಣ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಣೇಶ ವಿಸರ್ಜನೆಯ ಬಳಿಕ ಮನೆಗೆ ವಾಪಸ್ ಬರುತ್ತಿದ್ದ ವೇಳೆಯಲ್ಲಿ ವಿದ್ಯುತ್ ತಂತಿಗೆ ಟ್ರ್ಯಾಕ್ಟರ್‌ನಲ್ಲಿದ್ದ ಪ್ರಭಾವಳಿ ತಾಗಿದ ಮೂವರು ಮೃತ ಪಟ್ಟು, ಮೂವರು ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಣಪತಿ ವಿಸರ್ಜನಾ ಮೆರವಣಿಗೆ ಮುಗಿಸಿ ವಾಪಸ್ ಬರುವ ಸಂದರ್ಭ 20ಕ್ಕೂ ಹೆಚ್ಚು ಮಂದಿ ಟ್ರ್ಯಾಕ್ಟರ್‌ನಲ್ಲಿ ಬಂದಿದ್ದರು. ಘಟನಾ ಸ್ಥಳಕ್ಕೆ ಸ್ವಲ್ಪ ಮೊದಲು ಕೆಳಗಿಳಿದು ತಮ್ಮ ಮನೆಗಳಿಗೆ ಹೋಗಿದ್ದಾರೆ.

ADVERTISEMENT

ವಿದ್ಯುತ್ ಅವಘಡದಿಂದ ಮೃತಪಟ್ಟ ರಾಜು(47) ಮತ್ತು ರಚನಾ(26) ನೆರೆಹೊರೆ ಮನೆಯವರಾಗಿದ್ದು, ಪಾರ್ವತಿ(35) ಅವರ ಮನೆ ಸಮೀಪದಲ್ಲಿಯೇ ಇದೆ. ಗ್ರಾಮದ ಮೂರು ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದ್ದು ನೂರಾರು ಸಂಖ್ಯೆಯಲ್ಲಿ ಜನರು ಅಂತ್ಯಸಂಸ್ಕಾರಕ್ಕೆ ನೆರೆದಿದ್ದರು.

ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಮೂವರು ಮಂಗಳವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಮೃತ ಪಾರ್ವತಿ ಅವರಿಗೆ ಪತಿ, ಅತ್ತೆ ಹಾಗೂ ಪುತ್ರ, ರಚನಾ ಅವರಿಗೆ ತಮ್ಮ, ತಂದೆ, ತಾಯಿ ಹಾಗೂ ರಾಜು ಅವರಿಗೆ ಹೆಂಡತಿ ಮತ್ತು ಪುತ್ರ ಇದ್ದಾರೆ.

ಟ್ರ್ಯಾಕ್ಟರ್‌ ಚಾಲಕ ನಾಗೇಶ್ ಎಂಬುವರ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಬಣಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.