ADVERTISEMENT

ಚಿಕ್ಕಮಗಳೂರು | ಸಮೀಕ್ಷೆ ಯಶಸ್ವಿಯಾದರೆ ಮೀಸಲಾತಿ ಹೆಚ್ಚಳ: ಜಿ.ಪದ್ಮಾವತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 4:27 IST
Last Updated 15 ಅಕ್ಟೋಬರ್ 2025, 4:27 IST
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅವರು ಅಧಿಕಾರಿಗಳು ಮತ್ತು ಸಂಘ–ಸಂಸ್ಥೆಗಳ ಮುಖಂಡರ ಸಭೆ ನಡೆಸಿದರು
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅವರು ಅಧಿಕಾರಿಗಳು ಮತ್ತು ಸಂಘ–ಸಂಸ್ಥೆಗಳ ಮುಖಂಡರ ಸಭೆ ನಡೆಸಿದರು   

ಚಿಕ್ಕಮಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ಕಾರ್ಯ ಪ್ರತ್ಯೇಕವಾಗಿ ನಿಗಮದಿಂದ ನಡೆಯುತ್ತಿದ್ದು, ಯಶಸ್ವಿಯಾಗಿ ಎಲ್ಲರೂ ಭಾಗವಹಿಸಿದರೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಅನುಕೂಲ ಆಗಲಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ವಿವಿಧ ಸಂಘ–ಸಂಸ್ಥೆಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ‘ಕುಟುಂಬಕ್ಕೆ ಅಥವಾ ಸಮಾಜಕ್ಕೆ ಹೆದರಿ ಸಮೀಕ್ಷೆಯಿಂದ ಹಿಂದೆ ಉಳಿದರೆ ಇಡೀ ಸಮುದಾಯಕ್ಕೆ ಅನ್ಯಾಯವಾಗಲಿದೆ’ ಎಂದರು.

ರಾಜ್ಯದಲ್ಲಿ ಎಷ್ಟು ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂಬುದನ್ನು ಅರಿಯಲು ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಇದಾಗಿದೆ. ಪ್ರತಿ ಜಿಲ್ಲೆಯಲ್ಲಿ ಸಮೀಕ್ಷೆ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ತಿಳಿಯಲು ಖುದ್ದಾಗಿ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಸಾಕಷ್ಟು ವಿದ್ಯಾವಂತರಿದ್ದು, ಸಮಾಜವನ್ನು ಅರಿತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಏಳಿಗೆಗೆ ಹಲವರು ದುಡಿಯುತ್ತಿದ್ದಾರೆ. ಅಂತವರನ್ನು ಗುರುತಿಸಿ ಅವರ ಮೂಲಕವೂ ಸಮೀಕ್ಷೆ ಮಾಡಿಸಲಾಗುತ್ತಿದೆ. ಈ ಸಮೀಕ್ಷೆ ಯಶಸ್ವಿಗೊಳಿಸಲು ಸಹಕಾರ ನೀಡಬೇಕು. ಸಮೀಕ್ಷೆಯಿಂದ ದೂರ ಉಳಿದವರ ಮನವೊಲಿಸಬೇಕು ಎಂದು ಮನವಿ ಮಾಡಿದರು.

‘ವಿಶೇಷ ವಸತಿ ಯೋಜನೆಯಡಿ ಚಿಕ್ಕಮಗಳೂರು ನಗರದಲ್ಲಿ 6 ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲು ಗುರಿ ಇದೆ. 4 ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಸತಿ ಸೌಕರ್ಯ ಸಿಗುವುದು ಯಾವಾಗ’ ಎಂದು ಲಿಂಗತ್ವ ಅಲ್ಪಸಂಖ್ಯಾತರ ಮುಖಂಡರಾದ ಮೇಘರಾಜ್ ಮಲ್ನಾಡ್‌ ಪ್ರಶ್ನಿಸಿದರು.

ನಗರಸಭೆ ರೂಪಿಸಿರುವ ವಸತಿ ಯೋಜನೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ 6 ಫಲಾನುಭವಿಗಳಿಗೆ ಮನೆ ಕೊಡಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ವಿಳಂಬವಾಗಿದೆ ಎಂದು ನಿಗಮದ ಅಭಿವೃದ್ಧಿ ನಿರೀಕ್ಷಕಿ ಬಿ.ಕೆ.ಪವಿತ್ರಾ ಮಾಹಿತಿ ನೀಡಿದರು.

ಬಳಿಕ ನಗರಸಭೆ ಅಧಿಕಾರಿಗಳನ್ನು ಸಭೆಗೆ ಕರೆಸಿದ ಅಧ್ಯಕ್ಷೆ ಜಿ.ಪದ್ಮಾವತಿ ಅವರು, ವಿಳಂಬಕ್ಕೆ ಕಾರಣ ತಿಳಿಸುವಂತೆ ಸೂಚಿಸಿದರು. ‘ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಕೂಡಲೇ ಲಿಂಗತ್ವ ಅಲ್ಪಸಂಖ್ಯಾತ 6 ಫಲಾನುಭವಿಗಳಿಗೆ ಮನೆ ನೀಡಲಾಗುವುದು’ ಎಂದು ನಗರಸಭೆ ಅಧಿಕಾರಿಗಳು ವಿವರಿಸಿದರು.

ನಿಗಮದ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಸಹಿತ ವಸತಿ ಕಲ್ಪಿಸಲು ನಗರಾಭಿವೃದ್ಧಿ ಕೋಶ, ಪುರಸಭೆ, ನಗರಸಭೆಗಳಿಗೆ ಒಟ್ಟು 23 ಅರ್ಜಿಗಳನ್ನು ಕಳುಹಿಸಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 28 ಲಿಂಗತ್ವ ಅಲ್ಪಸಂಖ್ಯಾತರು ಟಿ.ಜಿ (ಟ್ರಾನ್ಸ್ ಜೆಂಡರ್) ಕಾರ್ಡ್ ಹೊಂದಿದ್ದಾರೆ. 24 ಜನ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ. 7 ಆಸಿಡ್ ದಾಳಿ ಪ್ರಕರಣಗಳಲ್ಲಿ ನಾಲ್ವರು ಫಲಾನುಭವಿಗಳಿಗೆ ನಿಗಮದ ಗೆಳತಿ ಯೋಜನೆಯಡಿ ತಲಾ ₹5 ಲಕ್ಷ  ಸಾಲ ಮತ್ತು ಸಹಾಯಧನ ಮಂಜೂರಾಗಿದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ, ಜಿಲ್ಲಾ ನಿರೂಪಣಾಧಿಕಾರಿ ಡಿ.ಸಂತೋಷ್ ಉಪಸ್ಥಿತರಿದ್ದರು.

ಉದ್ಯೋಗಿನಿ ಯೋಜನೆಗೆ ₹15 ಕೋಟಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಿಗಮಕ್ಕೆ ₹32 ಕೋಟಿ ಅನುದಾನ ಒದಗಿಸಿದ್ದು ಇದರಲ್ಲಿ ₹15 ಕೋಟಿ ಅನುದಾನ ಉದ್ಯೋಗಿನಿ ಯೋಜನೆಗೆ ಮೀಸಲಿಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ತಿಳಿಸಿದರು. ಮಾಜಿ ದೇವದಾಸಿಯರಿಗೆ ₹2 ಸಾವಿರ ಮಾಸಾಶನ ನೀಡಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ವರ್ಷಕ್ಕೆ ₹30 ಸಾವಿರ ಸಹಾಯಧನ ಆಸಿಡ್ ದಾಳಿಗೆ ತುತ್ತಾದವರಿಗೆ ಜೀವನಾಧಾರಕ್ಕೆ ₹10 ಸಾವಿರ ಮಾಸಾಶನ ಹಾಗೂ ನಿಗಮದಿಂದ ₹5 ಲಕ್ಷ ಸಹಾಯಧನ ನೀಡಲಾಗುತ್ತಿದೆ  ಎಂದು ಹೇಳಿದರು. ನಿಗಮದ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಇನ್ನಷ್ಟು ಮುತುವರ್ಜಿ ವಹಿಸಬೇಕು. ಫಲಾನುಭವಿಗಳು ಕಚೇರಿ ಹುಡುಕಿಕೊಂಡು ಬರದಿದ್ದರೆ ಅಧಿಕಾರಿಗಳೇ ಫಲಾನುಭವಿಗಳನ್ನು ಹುಡುಕಿಕೊಂಡು ಹೋಗಿ ಸವಲತ್ತು ಒದಗಿಸಬೇಕು ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.