ಕಡೂರು: ತಾಲ್ಲೂಕಿನ ಎಂ.ಕೋಡಿಹಳ್ಳಿ ಕೆರೆ ಬದಿಯಲ್ಲಿರುವ 1,000 ವರ್ಷ ಹಳೆಯ ಕಲ್ಲೇಶ್ವರ ತ್ರಿಕೂಟ ದೇವಸ್ಥಾನದಲ್ಲಿ ಬುಧವಾರ ರಾತ್ರಿ ನೆಲಹಾಸನ್ನು ಬಗೆದು ಹಾಕಲಾಗಿದೆ. ನಿಧಿಯ ಆಸೆಗಾಗಿ ಈ ಕೆಲಸ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ದೇವಸ್ಥಾನಕ್ಕೆ ಮೂರು ಬಾಗಿಲುಗಳಿದ್ದು, ನವರಂಗದಲ್ಲಿ ನಾಟ್ಯ ವೃತ್ತವಿದೆ. ಈ ವೃತ್ತದಲ್ಲಿದ್ದ ಬಸವಣ್ಣ ವಿಗ್ರಹವನ್ನು ಬದಿಗಿರಿಸಿ ಅದರಡಿಯಲ್ಲಿದ್ದ ಸುಮಾರು ಮೂರು ಅಡಿ ದಪ್ಪದ ಕಲ್ಲು ಚಪ್ಪಡಿಯನ್ನು ಚೈನ್ ಉಪಯೋಗಿಸಿ ಮೇಲಕ್ಕೆತ್ತಿ, ಐದು ಅಡಿಗೂ ಹೆಚ್ಚು ಆಳ ಹಾಗೂ ಅಡ್ಡದಲ್ಲಿ ಎಂಟು ಅಡಿಗೂ ಹೆಚ್ಚು ಬಗೆಯಲಾಗಿದೆ.
ನವರಂಗದಲ್ಲಿರುವ ನಾಲ್ಕು ಕಂಬಗಳ ಬಳಿಯೂ ತಾಮ್ರದ ತಗಡು, ಸಣ್ಣ ಮಡಕೆ, ನಿಂಬೆಹಣ್ಣು ಮುಂತಾದವುಗಳನ್ನು ಇಟ್ಟು ಪೂಜೆ ಮಾಡಿರುವುದು ನೋಡಿದರೆ ನಿಧಿ ಶೋಧಕ್ಕಾಗಿ ಹೀಗೆ ಮಾಡಿರಬಹುದು ಅನ್ನಿಸುತ್ತದೆ ಎನ್ನುತ್ತಾರೆ ಸ್ಥಳೀಯರು.
ಈ ದೇವಸ್ಥಾನದ ಸುತ್ತಲೂ ತೋಟಗಳಿದ್ದು, ರೈತರು ಹಗಲೂ ರಾತ್ರಿ ಅಲ್ಲಿ ಓಡಾಡುತ್ತಿರುತ್ತಾರೆ. ಸಾಮಾನ್ಯರು ಎತ್ತಲಾರದ ಚಪ್ಪಡಿ ಕಲ್ಲುಗಳನ್ನು ಎತ್ತಿರುವುದನ್ನು ಗಮನಿಸಿದರೆ, ಕೃತ್ಯದಲ್ಲಿ ಬಹಳಷ್ಟು ಜನರು ಇರಬಹುದು ಮತ್ತು ಚೈನ್ ಪುಲ್ಲಿ ಮತ್ತಿತರ ಸಾಮಗ್ರಿ ಬಳಸಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಪರಿಚಿತರೇ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನವೂ ಸ್ಥಳೀಯರನ್ನು ಕಾಡುತ್ತಿದೆ.
ಪಿಎಸ್‌ಐ ಪವನ್ ಕುಮಾರ್, ಧನಂಜಯ ಮತ್ತು ಸಿಬ್ಬಂದಿ ದೇವಸ್ಥಾನಕ್ಕೆ ಗುರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಯ್ಸಳ ದೊರೆ 1ನೇ ನರಸಿಂಹನ ಕಾಲದಲ್ಲಿ ಸ್ಥಳೀಯ ಆಡಳಿತಾಧಿಕಾರಿ ಕಲಿದೇವ ಈ ದೇವಸ್ಥಾನ ನಿರ್ಮಾಣ ಮಾಡಿರುವ ಬಗ್ಗೆ ಶಾಸನವಿದೆ. ಶಿಥಿಲವಾದ ದೇವಸ್ಥಾನಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮಂಗಳೂರಿನ ಪುರೋಹಿತರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು.
ಕಂಬದ ಬಳಿ ಸಾಮಗ್ರಿ ಇಟ್ಟು ಪೂಜೆ ಪರಿಚಿತರೇ ಈ ಕೃತ್ಯ ನಡೆಸಿರು ಶಂಕೆ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.