ADVERTISEMENT

‘ನೇರಳೆ ಮರದ ಮೇಲೆ ಬೆಳೆಯುತ್ತಿರುವ ಅಶ್ವತ್ಥ ಮರ’

ಪ್ರಕೃತಿ ವಿಶೇಷತೆ:ವಾಯು ವಿಹಾರಿಗಳು, ಮಕ್ಕಳ ಕೌತುಕ

ಸಿ.ಎಸ್.ಅನಿಲ್‌ಕುಮಾರ್
Published 9 ಜೂನ್ 2019, 19:30 IST
Last Updated 9 ಜೂನ್ 2019, 19:30 IST
ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿರುವ ನೇರಳೆ ಮರ.
ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿರುವ ನೇರಳೆ ಮರ.   

ಚಿಕ್ಕಮಗಳೂರು: ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಕ್ರೀಡಾಂಗಣದ ವೇದಿಕೆ ಹಿಂಬಾಗದ ವಿಹಾರ ಪತದಲ್ಲಿರುವ ನೇರಳೆ ಮರದ ಮೇಲೆ ಅಶ್ವತ್ಥಮರ ಬೆಳದಿದ್ದು ಸಾರ್ವಜನಿಕರನ್ನು ಬೆರಗುಗೊಳಿಸುತ್ತಿದೆ.

ಸಾಮಾನ್ಯವಾಗಿ ನೀರಿನ ಟ್ಯಾಂಕ್‌ಗಳು, ಗೋಡೆಗಳು, ಮೆಟ್ಟಿಲುಗಳ ಸಂದಿ, ಪೊಟರೆ, ಮರಗಳ ಮೇಲೆ ಅರಳಿ, ಆಲ, ಹಲಸಿನ ಸಣ್ಣ ಸಸಿಗಳು ಬೆಳೆದಿರುತ್ತವೆ. ಅವು ದಪ್ಪಾಗಾಗುವುದಿಲ್ಲ. ಅಲ್ಪಾವಧಿಯಲ್ಲಿ ಸಾಯುತ್ತವೆ. ಆದರೆ ಈ ವಿವಾರ ಪತದಲ್ಲಿರುವ ನೇರಳೆ ಮರದ ಕಾಂಡದ ಕವಲೊಡೆದ ರೆಂಬೆಗಳ ನಡುವೆ ಅರಳಿ ಮರ ಬೆಳೆದಿದ್ದು, ಸದೃಢವಾಗಿದೆ. ಅರಳಿ ಮರದ ಬಳ್ಳಿಯಂತಹ ಬೇರುಗಳು ನೇರಳೆ ಮರದ ರೆಂಬೆಯಿಂದ ಹೊರ ಬಂದಿವೆ.

ಈ ನೇರಳೆ ಮರ ನೇರಳೆ ಹಣ್ಣುಗಳಿಂದ ಮೈದುಂಬಿದೆ. ವಿಹಾರಪತದಲ್ಲಿ ಬಿದ್ದಿರುವ ನೇರಳೆ ಹಣ್ಣನ್ನು ನೋಡಿ ಜನರು ಮರದ ಕಡೆ ತಲೆ ಎತ್ತಿದಾಗ ಪ್ರಕೃತಿಯ ಈ ಕೌತುಕ ಕಂಡು ಸಂತಸ ಪಡುತ್ತಿದ್ದಾರೆ. ಕೆಲವರು ಐದತ್ತು ನಿಮಿಷ ನಿಂತು ಈ ಮರಗಳನ್ನು ಪರಿಶೀಲಿಸಿ ಆಶ್ಚರ್ಯಗೊಳ್ಳುತ್ತಿದ್ದಾರೆ. ನೇರಳೆ ಹಣ್ಣು ಕುಯ್ಯಲು ಈ ಮರ ಏರುವ ಮಕ್ಕಳು ಪ್ರಕೃತಿಯ ವಿಸ್ಮಯ ನೋಡಿ ಚಕಿತಗೊಳ್ಳುತ್ತಿದ್ದಾರೆ.

ADVERTISEMENT

‘ಹಕ್ಕಿಗಳು ಅರಳಿ ಮರದ ಹಣ್ಣನ್ನು ತಿಂದು, ಬೇರೆ ಮರದ ಮೇಲೆ ಪಿಕ್ಕೆ ಹಾಕುವುದರಿಂದ ಅರಳಿ ಬೀಜಗಳ ಪಸರಣ ಆಗುತ್ತದೆ. ಮರದಲ್ಲಿನ ಖನಿಜ, ನೀರು ಆಹಾರ ಪಡೆದು ಬೀಜಗಳು ಚಿಗುರೊಡೆಯುತ್ತವೆ. ಅವು ಮರಗಳಾಗಿ ಬೆಳೆಯುತ್ತವೆ.

ಹೀಗೆ ಬೆಳೆಯುವ ಕೆಲ ಪರಾವಲಂಭಿ ಮರಗಳು ಮೂಲ ಮರಗಳನ್ನು ಸಾಯಿಸಲು ಆರಂಭಿಸುತ್ತವೆ. ಇನ್ನು ಕೆಲವು ಮರಗಳು ಮೂಲ ಮರಕ್ಕೆ ಹಾನಿ ಮಾಡುವುದಿಲ್ಲ. ಅದರ ಜತೆಗೆ ಬೆಳೆಯುತ್ತವೆ. ಅದಕ್ಕೆ ಅಧಿಸಸ್ಯಗಳು ಎನ್ನುತ್ತಾರೆ’ಎಂದು ಪರಿಸರವಾದಿ ಜಿ.ವೀರೇಶ್ ಹೇಳಿದರು.

‘ಮರದ ಮೇಲೆ ಬೇರೊಂದು ಮರ ಬೆಳೆದಿರುವುದು ವಿಶೇಷವಾಗಿದೆ. ನೋಡಿದರೆ ಸಂತೋಷವಾಗುತ್ತದೆ. ಮನುಷ್ಯನು ಸಹ ಇದೇ ರೀತಿ ಭಾವೈಕ್ಯ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಘಟಕದ ಕಾರ್ಯದರ್ಶಿ ನಂದಕುಮಾರ್ ಹೇಳಿದರು.

ಬೀಜಗಳ ಪಸರಣದಿಂದ ಮರ
ಬೀಜಗಳ ಪಸರಣದಿಂದ ಒಂದು ಮರದ ಮೇಲೆ ಮೂರು–ನಾಲ್ಕು ಮರಗಳು ಬೆಳೆಯುತ್ತವೆ. ಪರಾವಲಂಬಿ ಮರಗಳ ಬೇರುಗಳು ಭೂಮಿಗೆ ತಾಗುತ್ತಿದ್ದಂತೆ ಮೂಲ ಮರವನ್ನು ಅವುಗಳು ಸಾಯಿಸಲು ಆರಂಭಿಸುತ್ತವೆ. ನಿತ್ಯಹರಿಧ್ವರ್ಣದ ಕಾಡುಗಳಲ್ಲಿ ಈ ರೀತಿಯ ಮರಗಳು ಹೆಚ್ಚಾಗಿರುತ್ತವೆ ಎಂದು ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಗೌತಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.