ಶೃಂಗೇರಿ: ನಕ್ಸಲರ ಶರಣಾಗತಿ ಬಗ್ಗೆ ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಹೇಳಿಕೆ ಖಂಡನೀಯ. ಶಾಸಕರಿಗೆ ವಿವೇಕದ ಕೊರತೆ ಎದ್ದು ಕಾಣುತ್ತಿದೆ ಎಂದು ಗಿರಿಜನ ಮುಖಂಡ ಮುಂಡಗಾರು ಚಂದ್ರಪ್ಪ ಎಂ.ಎ ಹೇಳಿದ್ದಾರೆ.
ಸುಮಾರು 25 ವರ್ಷಗಳಿಂದ ಕುದುರೆಮುಖ ರಾಷ್ಟೀಯ ಉದ್ಯಾನ ಮತ್ತು ಮಲೆನಾಡು ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಆದಿವಾಸಿ ಗಿರಿಜನರು ಮತ್ತು ಇತರರು ಅನುಭವಿಸಿದ ಕಷ್ಟ ಹೇಳತೀರದು. ನಕ್ಸಲರು ಮುಖ್ಯವಾಹಿನಿಗೆ ಬರುವ ವಿಚಾರ ತಿಳಿದಾಗ ಹೆಚ್ಚು ಖುಷಿ ಪಟ್ಟವರು ನಾವೇ. 25 ವರ್ಷಗಳಿಂದ ನಕ್ಸಲ್ ಕಾರ್ಯಾಚರಣೆಯಿಂದ ಭಯದ ವಾತವರಣದಲ್ಲಿ ಬದುಕು ಸಾಗಿಸಿಕೊಂಡು ಬಂದಿದ್ದೇವೆ. ಅನೇಕ ಗಿರಿಜನರು ನಕ್ಸಲರ ಹೆಸರಿನಲ್ಲಿ ಪೊಲೀಸ್ ಎನ್‍ಕೌಂಟರ್‌ಗೆ ಬಲಿಯಾಗಿದ್ದಾರೆ. ಪೊಲೀಸರ ಹತ್ಯೆಯೂ ನಡೆದಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಚಿತ್ರಣಗಳನ್ನು ಕಣ್ಮುಂದೆ ಕಟ್ಟಿಕೊಂಡು ಅಭಿವೃದ್ದಿಯೇ ಕಾಣದ ಗುಡ್ಡಗಾಡು ರಸ್ತೆಗಳು, ಹಕ್ಕುಪತ್ರ ಇಲ್ಲದ ಜಮೀನು, ಮನೆಗಳು ವಿದ್ಯುಚ್ಛಕ್ತಿ ಇಲ್ಲದ ಹಳ್ಳಿಗಳು ಹೀಗೆ ಹಲವಾರು ಸಮಸ್ಯೆಗಳಿಂದ ಬಳಲಿದ್ದ ನಮಗೆ ನಕ್ಸಲರ ಶರಣಾಗತಿ ಆರಾಮವಾಗಿ ರಾತ್ರಿ ನಿದ್ರೆ ಬರುವಂತೆ ಮಾಡಿದೆ. ಈ ಶೋಚನಿಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಸುನಿಲ್‍ಕುಮಾರ್, ಸಿ.ಟಿ ರವಿ, ಸರ್ಕಾರದ ನಡೆಯನ್ನು ಮತ್ತು ನಕ್ಸಲರನ್ನು ವಿರೋಧಿಸುವ ಭರದಲ್ಲಿ ಸಮಸ್ತ ಆದಿವಾಸಿಗಳು ಮತ್ತು ಸ್ಥಳೀಯರನ್ನು ವಿರೋಧಿಸಿದಂತಾಗಿದೆ. ವಿರೋಧಿ ಹೇಳಿಕೆ ನೀಡುವ ಪೂರ್ವದಲ್ಲಿ ಅಲ್ಲಿನ ಜನರ ಕಷ್ಟವನ್ನು ಅರ್ಥಮಾಡಿಕೊಳ್ಳಿ. ಅವರ ಹೇಳಿಕೆಗಳು ಸಮಸ್ಯೆಯನ್ನು ಜೀವಂತ ಉಳಿಸಿಕೊಳ್ಳುವ ಪ್ರಯತ್ನದಂತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.