ADVERTISEMENT

ಶಾಸಕರ ಮನವಿಯಂತೆ ಶೃಂಗೇರಿ ಕ್ಷೇತ್ರಕ್ಕೆ ₹ 25 ಕೋಟಿ ಬಿಡುಗಡೆ: ಜೀವರಾಜ್‌

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 13:25 IST
Last Updated 13 ಸೆಪ್ಟೆಂಬರ್ 2022, 13:25 IST
ಡಿ.ಎನ್.ಜೀವರಾಜ್ 
ಡಿ.ಎನ್.ಜೀವರಾಜ್    

ಬಾಳೆಹೊನ್ನೂರು: ‘ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅಪೆಂಡಿಕ್ಸ್ ಇ ಹಾಗೂ ಲೆಕ್ಕಶೀರ್ಷಿಕೆ 5054ರ ಅಡಿಯಲ್ಲಿ ₹ 25 ಕೋಟಿ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಶಾಸಕ ಟಿ.ಡಿ.ರಾಜೇಗೌಡ ಅವರು ಶೃಂಗೇರಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054ರ ಅಡಿಯಲ್ಲಿ ₹ 11.25 ಕೋಟಿ ಅನುದಾನವನ್ನು ಜುಲೈ7ರಂದು ಬಿಡುಗಡೆ ಮಾಡಿದೆ. ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕೆಂಬುದರ ಕುರಿತು ಶಾಸಕರಿಂದ ಮಾಹಿತಿ ಪಡೆದು ಅನುಷ್ಠಾನಗೊಳಿಸುವಂತೆ ಸೂಚಿಸಿದೆ’ ಎಂದರು.

‘ಜತೆಗೆ ಅಪೆಂಡಿಕ್ಸ್ ಇ ಲೆಕ್ಕಶೀರ್ಷಿಕೆ ಅಡಿಯಲ್ಲಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ₹ 13.75 ಕೋಟಿ ಅನುದಾನಕ್ಕೆ ಮುಖ್ಯಮಂತ್ರಿ ಅನುಮೋದನೆ ಮಾಡಿದ್ದಾರೆ. ಶಾಸಕರಿಂದ ಕಾಮಗಾರಿಗಳ ಪಟ್ಟಿ ಪಡೆದು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ‘ರಾಜ್ಯ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಜೀವರಾಜ್ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಆರೋಪ ಮಾಡುತ್ತಿರುವ ರಾಜೇಗೌಡರು ಈಗೇನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಈ ವರ್ಷ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶ ಅಭಿವೃದ್ಧಿಗಾಗಿ ₹ 8 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಿಗೆ ಮತ್ತೆ ಬಿಲ್ ಮಾಡುವ ಕೆಲಸ ಬೇಡ. ಆದ್ಯತೆ ಇರುವ ಕಡೆ ಗಮನ ಹರಿಸಲಿ’ ಎಂದು ಹೇಳಿದರು.

‘ಕಳೆದ ವರ್ಷದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿದೆ. ಮಕ್ಕಿಕೊಪ್ಪದಿಂದ ಬಸರೀಕಟ್ಟೆ ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಬಿದ್ದಿದೆ. ಈ ಬಗ್ಗೆ ಪ್ರಶ್ನಿಸಿದರೆ ಶಾಸಕ ರಾಜೇಗೌಡರು ಮಳೆಯಿಂದಾಗಿ ಹಾಳಾಗಿದೆ ಎನ್ನುತ್ತಾರೆ. ಹತ್ತಾರು ವರ್ಷದ ಹಿಂದೆ ಅಭಿವೃದ್ಧಿ ಕಂಡಿದ್ದ ನರಸಿಂಹರಾಜಪುರ, ಬಾಳೆಹೊನ್ನೂರು ನಡುವಿನ ರಸ್ತೆ ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ, ರಾಜೇಗೌಡರ ಅವಧಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅಲ್ಲಿ ಮಾತ್ರ ಭಾರಿ ಮಳೆ ಬೀಳುತ್ತದೆಯೇ’ ಎಂದು ವ್ಯಂಗ್ಯವಾಡಿದರು.

ಕಲ್ಮಕ್ಕಿಯ ಟಿ.ಎಂ.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.