ದಂಟರಮಕ್ಕಿ ಶ್ರೀನಿವಾಸ್
ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.
‘ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಬಡವರು, ಜಾತ್ಯಾತೀತ ಜನಪರ ಸಿದ್ಧಾಂತ ಇರುವ ಪಕ್ಷಗಳನ್ನು ದಸಂಸ ಬೆಂಬಲಿಸುತ್ತ ಬಂದಿದೆ. ಕರ್ನಾಟಕದ ಎಲ್ಲ ಚುನಾವಣೆಗಳಲ್ಲಿ ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ತೀರ್ಮಾನದಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಾಗಿದೆ. ಜನರಿಗೋಸ್ಕರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತದಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಸರಳವಾಗಿ ಅಧಿಕಾರ ಹಿಡಿಯುವ ಸಾಧ್ಯತೆ ಇತ್ತು. ಕಾಂಗ್ರೆಸ್ ಮುಖಂಡರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಸಹಕರಿಸುವ ಮೂಲಕ ಮತದಾರರಿಗೆ ಮಾಡಿದ ಅನ್ಯಾಯ. ಬಿಜೆಪಿಯಿಂದ ಸದಾ ಅವಗಣನೆಗೆ ಒಳಗಾಗುವ ಅಲ್ಪಸಂಖ್ಯಾತ ಸದಸ್ಯರು ಕೂಡ ಈ ಮೈತ್ರಿ ಬೆಂಬಲಿಸಿದ್ದಾರೆ. ಅವರು ನೈತಿಕ ಹೊಣೆ ಹೊತ್ತು ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ಮುಖಂಡ ಅಣ್ಣಯ್ಯ ಮಾತನಾಡಿ, ‘ಈ ಹಿಂದೆ ಕೋಮುವಾದಿ ಶಾಸಕರಿದ್ದರು. ಅವರನ್ನು ಸೋಲಿಸಿದೆವು. ಈಗಿರುವುದು ಜಾತಿವಾದಿ ಶಾಸಕ. ಎಲ್ಲಾ ಕೆಲಸಕ್ಕೂ ಜಾತಿ ನೋಡಿಯೇ ಮುಂದುವರಿಯುತ್ತಾರೆ. ನಗರಸಭೆ ಅಧ್ಯಕ್ಷ ಗಾದಿ ಏರಲು ಜೆಡಿಎಸ್ ಅಭ್ಯರ್ಥಿಗೆ ಸಹಕಾರ ನೀಡಿದ್ದರೆ’ ಎಂದು ಹೇಳಿದರು.
ಮುಂದಿನ ಚುನಾವಣೆಗಳಲ್ಲಿ ಈ ಮೂರು ಪಕ್ಷಗಳನ್ನು ಬಿಟ್ಟು ಜನರಿಗಾಗಿ ಸೇವೆ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡುವ ಅಗತ್ಯವಿದೆ. ಪರ್ಯಾಯ ರಾಜಕಾರಣದ ಅನಿವಾರ್ಯತೆ ಇದೆ ಎಂದರು.
ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ, ಮುಖಂಡರಾದ ರಘು, ಮುಖಂಡರಾದ ಪುಟ್ಟಸ್ವಾಮಿ, ಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.