ADVERTISEMENT

ಬಜೆಟ್‌: ಕಾಫಿ, ಅಡಿಕೆ ಮರೆತ ಕೇಂದ್ರ ಬಜೆಟ್

ಪ್ಯಾಕೇಜ್‌ ನಿರೀಕ್ಷೆಯಲ್ಲಿದ್ದ ಅಡಿಕೆ ಮತ್ತು ಕಾಫಿ ಬೆಳೆಗಾರರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 5:42 IST
Last Updated 2 ಫೆಬ್ರುವರಿ 2024, 5:42 IST
ಕಾಫಿ ಹಣ್ಣು
ಕಾಫಿ ಹಣ್ಣು   

ಚಿಕ್ಕಮಗಳೂರು: ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆಯಿಂದ ಕಂಗೆಟ್ಟು ಕೇಂದ್ರ ಬಜೆಟ್‌ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದ ಕಾಫಿ ಮತ್ತು ಅಡಿಕೆ ಬೆಳೆಗಾರರಿಗೆ ನಿರಾಸೆ ಉಂಟಾಗಿದೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ದೇಶಕ್ಕೆ ಹೆಚ್ಚಾಗಿ ವಿದೇಶಿ ವಿನಿಮಯ ತಂದುಕೊಡುವ ಉದ್ಯಮವಾಗಿದೆ. ಕಾಫಿ ಹಲವು ವರ್ಷಗಳಿಂದ ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆ ಸೇರಿ ಹಲವು ಸಮಸ್ಯೆಗಳಿಂದ ನಲುಗಿದೆ. ಸಮಸ್ಯೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಾಫಿ ಮಂಡಳಿ ಮೂಲಕ ಬೆಳೆಗಾರರು ಸಲ್ಲಿಸಿದ್ದರು.

ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳು ಬೆಳೆಗಾರರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಾಲ ಮರುಪಾವತಿಸದ ಬೆಳೆಗಾರರ ತೋಟಗಳನ್ನು ಹರಾಜು ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಕಾಫಿ ಉದ್ಯಮವನ್ನು ಹೊರಗಿಡಬೇಕು ಎಂಬುದು ಕಾಫಿ ಬೆಳೆಗಾರರ ಪ್ರಮುಖ ಬೇಡಿಕೆ.

ADVERTISEMENT

ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಬೆಳೆ ವೈಫಲ್ಯದಿಂದ ಕಂಗೆಟ್ಟಿರುವ ಬೆಳೆಗಾರರು ಮತ್ತಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಹವಾಮಾನ ವೈಪರಿತ್ಯದಿಂದ ಫಸಲು ಕೈಸೇರದಂತಾಗಿದೆ. ಬೆಲೆ ಇದ್ದರೂ ಬೆಳೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಹವಾಮಾನ ಆಧರಿತ ವಿಮೆ ವ್ಯಾಪ್ತಿಗೆ ಕಾಫಿಯನ್ನೂ ಸೇರಿಸಬೇಕು ಎಂಬುದು ಬೆಳೆಗಾರರ ಮನವಿ.

ಈ ಎಲ್ಲಾ ಬೇಡಿಕೆಗಳನ್ನು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಬೆಳೆಗಾರರು ಸಲ್ಲಿಸಿದ್ದರು. ಆದರೆ, ಕೇಂದ್ರ ಬಜೆಟ್‌ನಲ್ಲಿ ಕಾಫಿ ಬೆಳೆಯ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಬೆಳೆಗಾರರನ್ನು ನಿರಾಸೆಗೆ ದೂಡಿದೆ.  

ರೋಗ ಬಾಧೆಯಿಂದ ನರಳುತ್ತಿರುವ ಅಡಿಕೆ ಬೆಳೆಗಾರರು ಕೇಂದ್ರ ಸರ್ಕಾರದಿಂದ ಪ್ಯಾಕೇಜ್ ನೀರೀಕ್ಷೆ ಮಾಡಿದ್ದರು. ಕೇಂದ್ರದ ತಂಡಕ್ಕೂ ಮನವಿ ಸಲ್ಲಿಸಿದ್ದರು. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಪ ಇಲ್ಲದಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ರೈತರು.

ರೈತರ ಯುವಕರ ಮಹಿಳೆಯರ ಕಣ್ಣೊರೆಸುವ ತಂತ್ರವಿದೆ. ದಕ್ಷಿಣದ ರಾಜ್ಯಗಳನ್ನು ಕೇವಲ ತೆರಿಗೆ ಸಂಗ್ರಹಕ್ಕಾಗಿ ಇಟ್ಟುಕೊಂಡಿದ್ದಾರೆ. ನಿರಾಶಾದಾಯಕ ಬಜೆಟ್

- ಕೆ.ಎಸ್.ಆನಂದ್. ಶಾಸಕ ಕಡೂರು.

ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗದಿಂದ ಅಡಿಕೆ ಫಸಲು ಶೇ 50ರಷ್ಟು ಕಡಿತ ಆಗಿದೆ. ಪರಿಹಾರ ಮತ್ತು ಸಂಶೋಧನೆಗೆ ಹಣ ಒದಗಿಸುವ ನಿರೀಕ್ಷೆ ಇತ್ತು. ಇದೆಲ್ಲವೂ ಸುಳ್ಳಾಗಿದೆ.

–ಅನಿಲ್ ಡಿಸೋಜ ಅಡಿಕೆ ಬೆಳೆಗಾರರು ಕಳಸ

ಕಾಫಿ ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ

‘ಕಾಫಿ ಉದ್ಯಮದಿಂದ ವಿದೇಶಿ ವಿನಿಯಮ ಹೆಚ್ಚಾಗುತ್ತಿದೆ. ಆದರೂ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ’ ಎಂದು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್‌.ಜೈರಾಮ್‌ ಬೇಸರ ವ್ಯಕ್ತಪಡಿಸಿದರು. ಕಾರ್ಮಿಕರ ಸಮಸ್ಯೆ ನಡುವೆ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಪ್ರಮುಖವಾಗಿ ಸರ್ಫೇಸಿ ಕಾಯ್ದೆಯಿಂದ ಕಾಫಿ ಉದ್ಯಮ ಹೊರಗಿಡಬೇಕು ಎಂಬ ಮನವಿಯನ್ನು ಸರ್ಕಾರ ಪುರಸ್ಕರಿಸಿಲ್ಲ. ಇದರಿಂದ ಕಾಫಿ ತೋಟಗಳನ್ನೇ ಬ್ಯಾಂಕ್‌ಗಳು ಹರಾಜು ಮಾಡುತ್ತಿವೆ. ಕಾಫಿ ಬೆಳೆಗಾರರ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿ ಎಂದರು. ಹವಾಮಾನ ವೈಪರಿತ್ಯದಿಂದ ಕಾಫಿ ಹಣ್ಣು ಕೊಯ್ಲು ಸಾಧ್ಯವಾಗದೆ ಮಣ್ಣು ಪಾಲಾಗುತ್ತಿದೆ. ಹವಾಮಾನ ಆಧರಿತ ಬೆಳೆ ವಿಮಯನ್ನು ಕಾಫಿಗೂ ನೀಡಬೇಕು ಎಂಬ ಮನವಿಯನ್ನೂ ಸರ್ಕಾರ ‍ಪರಿಗಣಿಸಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.