ತರೀಕೆರೆ: ಹಳಿಯೂರು ಗ್ರಾಮದ ಗಂಧದ ಗುಡಿ - ಭಾಗ 2ರಲ್ಲಿ ಹಾದು ಹೋಗುತ್ತಿರುವ ಎನ್.ಎಚ್. 206ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದ ಕಾರಣ, ವಿವಿಧ ಸಂಘಟನೆಗಳ ಸಹಕಾರದಿಂದ ಟೋಲ್ ನಿರ್ಮಿಸಿ ಪ್ರತಿ ವಾಹನಕ್ಕೆ ₹1 ಶುಲ್ಕವನ್ನು ಪಡೆದು ಆ ಹಣವನ್ನು ರಸ್ತೆ ಪ್ರಾಧಿಕಾರಕ್ಕೆ ನೀಡಿ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಸಂತ್ರಸ್ತ 22 ಶ್ರೀಗಂಧ ಬೆಳೆಗಾರರು, ರೈತ ಪರ, ಕನ್ನಡ ಪರ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ವಾಹನ ಚಾಲಕರ ಮತ್ತು ಮಾಲೀಕರ ಸಂಘ, ಆಟೊ ಮಾಲೀಕರ ಮತ್ತು ಚಾಲಕರ ಸಂಘ ತರೀಕೆರೆ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಚಾಲನೆ ನೀಡಿದರು.
ಭೂಸ್ವಾಧೀನ ಅಧಿಕಾರಿಗಳು, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ 206ರ ಶಿವಮೊಗ್ಗ ಅವರು ನೀಡಿರುವ ಶ್ರೀಗಂಧ ಮರ / ಸಸಿಗಳಿಗೆ ಆವಾರ್ಡ್ ನೋಟೀಸ್ (ಸಪ್ಲಿಮೆಂಟರಿ 2) ಹಿಂಪಡೆಯುವ ಬಗ್ಗೆ 2025ರ ಮೇ 26ರಂದು ಶಿವಮೊಗ್ಗದ ಕಚೇರಿಯ ಮುಂದೆ ನೋಟೀಸ್ ಸುಟ್ಟುಹಾಕಿ, 24 ಗಂಟೆಯೊಳಗೆ ಈ ನೋಟೀಸ್ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುವುದಾಗಿ ಸಂಘ–ಸಂಸ್ಥೆಗಳು ಎಚ್ಚರಿಕೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ನೋಟೀಸ್ ಹಿಂಪಡೆಯದಿರುವ ಕಾರಣ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತರ ಪರವಾಗಿ ಟಿ.ಎನ್. ವಿಶುಕುಮಾರ್ ಹೇಳಿದರು.
ಅರಣ್ಯ ಇಲಾಖೆಯವರು ಶ್ರೀಗಂಧದ ಒಂದು ಮರಕ್ಕೆ ₹420 ದರ ನಿಗದಿ ಮಾಡಿದ್ದು, 12 ವರ್ಷದಿಂದ ಬೆಳೆದ ಒಂದು ಮರಕ್ಕೆ ಕೇವಲ ₹420 ಪರಿಹಾರ ದರ ನಿಗದಿಗೊಳಿಸಿರುವುದು ಅಮಾನವೀಯ. ಇಂತಹ ಅಧಿಕಾರಿಗಳಿಗೆ ಮತ್ತು ಅವರ ವಾಹನಗಳಿಗೆ ಈ ಟೋಲ್‍ನಲ್ಲಿ ಪ್ರವೇಶವಿಲ್ಲ ಎಂದರು.
ಕೆ.ಎಸ್.ಡಿ.ಎಲ್.ನವರೂ ನಾವು ಬೆಳೆದ ಒಂದು ಶ್ರೀಗಂಧದ ಮರಕ್ಕೆ ₹2,44,620 ನಿರ್ಧರಿಸಿದ್ದು, ಈಗ ಅರಣ್ಯ ಇಲಾಖೆಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ನಿಗದಿ ಪಡಿಸಿದ ದರವನ್ನು ಹಿಂಪಡೆದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ, ನಮಗೆ ಬರಬೇಕಾದ ನ್ಯಾಯಯುತವಾದ ಪರಿಹಾರಕ್ಕೆ ಪಂಗನಾಮ ಹಾಕಿ, ಮೋಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿ ಬಾಕಿ ಇರುವಾಗ ತರಾತುರಿಯಲ್ಲಿ ಅವಾರ್ಡ್ ಯಾಕೆ ಮಾಡೀದ್ದೀರಿ ? ನಮಗೆ ಬರಬೇಕಾದ ನ್ಯಾಯಯುತವಾದ ಶ್ರೀಗಂಧದ ಮರಗಳ ಪರಿಹಾರ ದೊರೆಯುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ರೈತ ಸಂಘದ ವರಿಷ್ಟ ಕೆ.ಟಿ. ಗಂಗಾಧರ, ನಮ್ಮ ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷರು ನರಸಿಂಹಯ್ಯ ಬಿ., ಗೌ. ಅಧ್ಯಕ್ಷ ಮೂರ್ತಿ, ಸದಸ್ಯರಾದ ನಾಗರಾಜು ಕೆ.ಟಿ., ಯಲ್ಲಪ್ಪ, ಬೆಂಗಳೂರು ನಗರಾಧ್ಯಕ್ಷ ರಮೇಶ್ ಎಂ., ಪುರಸಭಾ ಸದಸ್ಯ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷೆ ಗಿರಿಜಮ್ಮ ನಾಗರಾಜ್, ಮುಖಂಡ ಓಂಕಾರಪ್ಪ, ಸಂತ್ರಸ್ತ ರೈತರಾದ ಪ್ರತಾಪ್ ಕುಮಾರ್, ತಿಪ್ಪೇಶಪ್ಪ, ಮಲ್ಲಿಕಾರ್ಜುನ್, ಮಣಿ, ರುದ್ರೇಶ್, ನವೀನ್‍ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.