ADVERTISEMENT

ಸೋಲಿನಿಂದ ಆತ್ಮವಿಶ್ವಾಸ ವೃದ್ಧಿ: ಯುಪಿಎಸ್‌ಸಿ 359ನೇ ರ‍್ಯಾಂಕ್‌ ವಿಜೇತ ಮಿಥುನ್

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಿಥುನ್‌ಗೆ 359ನೇ ರ‍್ಯಾಂಕ್‌

ಬಿ.ಜೆ.ಧನ್ಯಪ್ರಸಾದ್
Published 16 ಆಗಸ್ಟ್ 2020, 19:30 IST
Last Updated 16 ಆಗಸ್ಟ್ 2020, 19:30 IST
ಮಿಥುನ್‌
ಮಿಥುನ್‌   

ಚಿಕ್ಕಮಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಈ ಬಾರಿ (ಯುಪಿಎಸ್‌ಸಿ) ಕಾಫಿನಾಡಿನ ಇಬ್ಬರು ರ‍್ಯಾಂಕ್‌ ಗಳಿಸಿ ಕೀರ್ತಿ ತಂದಿದ್ದಾರೆ. ಕೊಪ್ಪ ತಾಲ್ಲೂಕಿನ ಭಂಡಿಗಡಿಯ ಎಚ್‌.ಎನ್‌.ಮಿಥುನ್‌ ಅವರು 359ನೇ ರ‍್ಯಾಂಕ್‌ ಪಡೆದಿದ್ದಾರೆ. ಅವರು ಐದನೇ ಯತ್ನದಲ್ಲಿ ಸಫಲರಾಗಿದ್ದಾರೆ.

ಮಿಥುನ್‌ ಅವರು ಕೃಷಿಕ ನಾಗರಾಜ್‌ ಮತ್ತು ಗೃಹಿಣಿ ಗಾಯತ್ರಿ ದಂಪತಿ ಪುತ್ರ. ಯುಪಿಎಸ್‌ಸಿ ಪರೀಕ್ಷೆ ಯಲ್ಲಿ ಸಫಲವಾಗಲೇಬೇಕು ಎಂಬ ಗುರಿ ಇಟ್ಟುಕೊಂಡು ಛಲ, ಶ್ರದ್ಧೆ, ಪರಿಶ್ರಮದಿಂದ ಸಾಧಿಸಿದ್ದಾರೆ. ಸಾಧನೆಯ ಯಶೋಗಾಥೆಯನ್ನು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.

* ಕೇಂದ್ರ ನಾಗರಿಕ ಸೇವೆಗೆ ಸೇರುವ ಕನಸು ಚಿಗುರಿದ್ದು ಯಾವಾಗ?

ADVERTISEMENT

ಸಭೆ ಸಮಾರಂಭಗಳಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ನೋಡಿದ್ದೆ. ಅವರಂತೆ ಆಗಬೇಕು, ಜನರ ಸೇವೆ ಮಾಡಬೇಕು ಎಂದು ಕನಸು ಶಾಲಾ ದಿನಗಳಲ್ಲೇ ಚಿಗುರಿತ್ತು. 2014ರಲ್ಲಿ ಬಿ.ಇ ಮುಗಿಸಿದೆ. ಎರಡು ಕಂಪೆನಿಗಳಲ್ಲಿ ಉದ್ಯೋಗ ಸಿಕ್ಕಿದರೂ ಹೋಗಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯನ್ನೇ ಗುರಿ ಯಾಗಿಟ್ಟುಕೊಂಡಿದ್ದೆ. ನವದೆಹಲಿಗೆ ತೆರಳಿ ತಯಾರಿ ಶುರು ಮಾಡಿದೆ.

* ಕೋಚಿಂಗ್‌ ಹೋಗಿದ್ದಿರಾ? ಐಚ್ಛಿಕ ವಿಷಯ ಯಾವುದು ಆಯ್ಕೆ ಮಾಡಿಕೊಂಡಿದ್ದಿರಿ?

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಾಯೋಜಕತ್ವದಲ್ಲಿ ನವದೆಹಲಿಯಲ್ಲಿ ಕೋಚಿಂಗ್‌ ಸೇರಿದ್ದೆ. ಆಗ ದಿನಕ್ಕೆ 10ರಿಂದ 12 ಗಂಟೆ ಓದುತ್ತಿದ್ದೆ. ಐಚ್ಛಿಕ ವಿಷಯವಾಗಿ ಸಮಾಜಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದೆ.

* ಪರೀಕ್ಷೆ ಸಿದ್ಧತೆ, ಗುರಿ ತಲುಪಿದ ಬಗೆ ತಿಳಿಸಿ.

ಪಠ್ಯ ಸಮಗ್ರವಾಗಿ ಅಧ್ಯಯನ ಮಾಡಿದ್ದೆ. ಪಠ್ಯಪುಸ್ತಕ ಚೆನ್ನಾಗಿ ಓದಿ ವಿಷಯಗಳನ್ನು ಮನದಟ್ಟು ಮಾಡಿ ಕೊಂಡಿದ್ದೆ. ಅಂತರ್ಜಾಲದಿಂದಲೂ ಬಹಳಷ್ಟು ತಯಾರಿ ಮಾಡಿದ್ದೆ. ಬರೆದು ಅಭ್ಯಾಸ ಮಾಡುತ್ತಿದ್ದೆ.

ಗುರಿ ನಿರ್ದಿಷ್ಟವಾಗಿತ್ತು. ಸಾಧನೆ ಮಾಡುವ ಸಾಮರ್ಥ್ಯ ನನ್ನಲ್ಲಿದೆ ಎಂಬ ವಿಶ್ವಾಸವೂ ಇತ್ತು. ಪ್ರತಿ ಬಾರಿ ಸೋತಾಗಲೂ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ‘ಎದೆಗೆ ಬಿದ್ದ ಅಕ್ಷರ, ಇಳೆಗೆ ಬಿದ್ದ ಬೀಜ; ಇಂದಲ್ಲ ನಾಳೆ ಫಲ ನೀಡುತ್ತದೆ’ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಮುನ್ನಡೆಯುತ್ತಿದ್ದೇನೆ. ಕುವೆಂಪು ಸಾಹಿತ್ಯ, ನೆಲ್ಸನ್‌ ಮಂಡೇಲಾ, ಅಬ್ದುಲ್‌ ಕಲಾಂ ಮೊದಲಾದ ಮಹನೀಯರ ಜೀವನ ಚರಿತ್ರೆ ಓದಿದ್ದೆ. ಪೋಷಕರ ಪ್ರೋತ್ಸಾಹ ಸದಾ ಬೆನ್ನಿಗಿತ್ತು. ಐದನೇ ಬಾರಿಗೆ ಯುಶಸ್ಸು ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.