ಕಡೂರು: ಇಲ್ಲಿನ ಎಪಿಎಂಸಿಯ ಎರಡು ಖರೀದಿ ಕೇಂದ್ರಗಳಲ್ಲಿ ಈ ಋತುವಿನಲ್ಲಿ ಇದುವರೆಗೆ ಒಟ್ಟು ₹ 14 ಕೋಟಿ ಮೌಲ್ಯದ ರಾಗಿ ಖರೀದಿ ಆಗಿದೆ. ಕೆಲವು ದಿನಗಳಿಂದ ಮಳೆಯಿಂದಾಗಿ ಖರೀದಿ ಕೇಂದ್ರಗಳಲ್ಲಿ ಗೊಂದಲ ಇದೆಯಾದರೂ ಒಟ್ಟಾರೆ ಎರಡು ಕೇಂದ್ರಗಳಲ್ಲಿ 37282 ಕ್ವಿಂಟಾಲ್ ರಾಗಿ ದಾಸ್ತಾನು ಆಗಿದೆ.
1ನೇ ಕೇಂದ್ರದಲ್ಲಿ 2,647 ರೈತರು ನೋಂದಣಿಯಾಗಿದ್ದು ಇಲ್ಲಿ ತನಕ 724 ರೈತರಿಂದ 19,844 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. 2ನೇ ಕೇಂದ್ರದಲ್ಲಿ 2,032 ರೈತರು ನೋಂದಣಿ ಮಾಡಿಕೊಂಡಿದ್ದು ಇಲ್ಲಿಯ ವರೆಗೆ 711 ರೈತರು 17,438 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದಾರೆ. ಕ್ವಿಂಟಾಲಿಗೆ ₹ 3,860ರಂತೆ ಒಟ್ಟು ₹14,31,62 880 ಮೊತ್ತದ ರಾಗಿ ಖರೀದಿ ಮಾಡಲಾಗಿದೆ. ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತದೆ.
ಟಾರ್ಪಲ್ ಹಾಕಿ ರಾಗಿ ರಕ್ಷಣೆ
ಮಾರುಕಟ್ಟೆಗೆ ರಾಗಿ ತೆಗೆದುಕೊಂಡು ಬರುವ ರೈತರಿಗೆ ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೊಂದರೆಯಾಗಿದ್ದು ರಾಗಿ ಚೀಲಗಳನ್ನು ಇಳಿಸಲಾಗದೆ ಎಪಿಎಂಸಿ ಆವರಣದಲ್ಲೇ ಇರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ವಾರದಿಂದ ತಾಲ್ಲೂಕಿಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ನಡುವೆ ರಾಗಿ ತೆಗೆದುಕೊಂಡು ಬಂದ ರೈತರು ಚೀಲಗಳನ್ನು ಇಳಿಸಲಾಗದೆ ಟ್ರಾಕ್ಟರ್ ಮೇಲೆ ಟಾರ್ಪಲ್ ಹಾಕಿ ರಕ್ಷಿಸಿಕೊಂಡಿದ್ದಾರೆ. ರಾಗಿ ಚೀಲಗಳನ್ನು ಎಪಿಎಂಸಿಯ ಶೆಡ್‌ನಲ್ಲಿ ಇರಿಸಲು ಅವಕಾಶ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ರಾಗಿ ಖರೀದಿಸುವ ಮುನ್ನ ಗುಣಮಟ್ಟ ಪರೀಕ್ಷೆ ಕಡ್ಡಾಯ. ಒಬ್ಬ ರೈತ 20 ಚೀಲ ರಾಗಿ ತಂದರೆ ಪ್ರತಿಯೊಂದನ್ನೂ ಪರೀಕ್ಷೆ ಮಾಡಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತದೆ. ಎಲ್ಲ ಚೀಲಗಳೂ ಒಂದೇ ರೀತಿ ಇರುವುದಿಲ್ಲ. ಕೆಲ ಚೀಲಗಳಲ್ಲಿ ರಾಗಿ ಜೊತೆ ಮಣ್ಣಿನ ಅಂಶ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ ರಾಗಿ ಶುಚಿಗೊಳಿಸಿಕೊಟ್ಟ ನಂತರವಷ್ಟೇ ಖದೀದಿಸಲಾಗುತ್ತದೆ. ಖರೀದಿ ನಂತರ 50 ಕೆಜಿಯಂತೆ ಚೀಲಗಳಿಗೆ ತುಂಬಿ ಸೀಲ್ ಮಾಡಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತದೆ ಎಂದು ಖರೀದಿ ಕೇಂದ್ರದ ಅಧಿಕಾರಿ ತಿಳಿಸಿದರು.
ನೋಂದಣಿಯಾದ ರೈತರಿಗೆ ನಿರ್ದಿಷ್ಟ ದಿನದಂದು ರಾಗಿ ತರಲು ಕರೆ ಮಾಡಿ ತಿಳಿಸಲಾಗುತ್ತದೆ. ಕೆಲವೊಮ್ಮೆ ರೈತರು ಕರೆಗೆ ಕಾಯದೇ ಕೇಂದ್ರಕ್ಕೆ ಬರುತ್ತಾರೆ. ಇದರಿಂದಲೂ ಒಂದಿಷ್ಟು ಗೊಂದಲ ಉಂಟಾಗಿ ಖರೀದಿ ಪ್ರಕ್ರಿಯೆ ತಡವಾಗುತ್ತದೆ. ಕೇಂದ್ರದಿಂದ ಕರೆ ಬಂದ ನಂತರವೇ ರೈತರು ರಾಗಿ ತಂದರೆ ಒಳ್ಳೆಯದು ಎಂಬುದು ಖರೀದಿ ಕೇಂದ್ರದ ಅಧಿಕಾರಿಗಳ ಅಭಿಪ್ರಾಯ.
ರಾಗಿ ಕೇಂದ್ರಕ್ಕೆ ಬಂದಾಗ ಮಳೆಯಾದರೆ ರಾಗಿ ಚೀಲಗಳನ್ನು ಇಳಿಸಲು ತುಂಬ ಸಮಯ ತೆಗೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ಶೆಡ್ ಕೆಳಗೆ ರಾಗಿ ಚೀಲಗಳನ್ನು ಇಳಿಸಲು ಅವಕಾಶ ಮಾಡಿಕೊಡಬೇಕು.ಚೆನ್ನಪ್ಪ, ರೈತ ಮಚ್ಚೇರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.