ADVERTISEMENT

ಸ್ಥಳೀಯ ಮುಸ್ಲಿಂಮರ ಪ್ರತಿರೋಧದ ನಡುವೆ ಉರುಸ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 14:40 IST
Last Updated 8 ಮಾರ್ಚ್ 2023, 14:40 IST
   

ಚಿಕ್ಕಮಗಳೂರು: ನಗರದ ಹಜರತ್‌ ದಾದಾ ಹಯಾತ್‌ ಮೀರ್‌ ಕಲಂದರ್‌ ಸಮಿತಿ ಮತ್ತು ಸ್ಥಳೀಯ ಕೆಲವು ಮಸ್ಲಿಂ ಮುಖಂಡರ ನಡುವೆ ಪ್ರತಿರೋಧದ ನಡುವೆ ಜಿಲ್ಲಾಡಳಿತದ ವತಿಯಿಂದ ಬುಧವಾರ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಉರುಸ್‌ ಕೈಂಕರ್ಯಗಳು ನಡೆದವು.

ಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಸಂಸ್ಥೆ ಮೇಲುಸ್ತುವಾರಿಗೆ ಸರ್ಕಾರ ರಚಿಸಿರುವ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಉರುಸ್‌ ಧಾರ್ಮಿಕ ವಿಧಿ ನೇರವೇರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಎಂಟು ಮಂದಿಯ ಸಮಿತಿಯಲ್ಲಿ ಏಳು ಮಂದಿ ಹಿಂದೂಗಳು ಮತ್ತು ಮುಸ್ಲಿಂ ಒಬ್ಬರು ಮಾತ್ರ ಇದ್ದಾರೆ. ಸಮಿತಿ ರಚನೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ಸಜ್ಜಾದ್‌ ನಿಶಾನ್‌ ಸಯ್ಯದ್‌ ಗೌಸ್‌ ಮೊಹಿಯುದ್ದಿನ್ ಶಾಖಾದ್ರಿ, ಮುಖಂಡರಾದ ಕೆ.ಮಹಮ್ಮದ್‌, ಹುಸೇನ್‌, ಜಂಶಿದ್‌ ಖಾನ್‌ ಮೊದಲಾದವರು ಪಾಲ್ಗೊಂಡಿದ್ದರು.

ಅತ್ತಿಗುಂಡಿಯಿಂದ ಸಂದಲ್‌ (ಗಂಧ) ತರಲಾಯಿತು. ಮುಜಾವ್‌ ಸಯ್ಯದ್‌ ಅಕಿರ್‌ ಪಾಷಾ ಅವರು ಗುಹೆಯೊಳಗೆ ಮತ್ತು ಆವರಣದಲ್ಲಿ ಗೋರಿಗಳಿಗೆ ಗಂಧ ಹಚ್ಚಿದ್ದರು. ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ನಾಡಿನ ವಿವಿಧೆಡೆಗಳಿಂದ ಬಂದಿದ್ದ ಮುಸ್ಲಿಮರು ಗುಹೆಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
‘ಹೋಳಿ ಹುಣ್ಣಿಮೆ ಮುಗಿದ ದಿನ ಉರುಸ್‌ ಆಚರಿಸಬೇಕು. ಆದರೆ, ಜಿಲ್ಲಾಡಳಿತ ಅದನ್ನು ಪಾಲಿಸಿಲ್ಲ’ ಎಂದು ಗೌಸ್‌ ಮೊಹಿಯದ್ದಿನ್‌ ಶಾಖಾದ್ರಿ ದೂರಿದರು.

ಹುಣ್ಣಿಮೆ ಮರುದಿನ ಉರುಸ್‌ ಆಚರಿಸಬೇಕು ಎಂದು ಆದೇಶದಲ್ಲಿ ಇದೆ. ಸರ್ಕಾರದ ಆದೇಶದಂತೆ ಪಾಲಿಸಿದ್ದೇವೆ. ಮೂರು ದಿನ ಉರುಸ್‌ ನಡೆಯುತ್ತದೆ, ಸ್ಥಳೀಯರು ಪಾಲ್ಗೊಳ್ಳಬಹುದು.

–ಕೆ.ಎನ್‌.ರಮೇಶ್‌, ಜಿಲ್ಲಾಧಿಕಾರಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.