ರಂಭಾಪುರಿ ಪೀಠ (ಬಾಳೆಹೊನ್ನೂರು): ‘ವೀರಶೈವ- ಲಿಂಗಾಯತ ಬೇರೆ ಬೇರೆ ಎಂದು ಹೇಳುವ ಮೂಲಕ ಕೆಲವು ಮಠಾಧೀಶರು ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಸೆ. 19ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಪಂಚ ಪೀಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ರಂಭಾಪುರಿ ಪೀಠದಲ್ಲಿ ಭಾನುವಾರ ಹುಣ್ಣಿಮೆ ಪ್ರಯುಕ್ತ ಸಂಯೋಜಿಸಿದ್ದ ‘ಜನಜಾತಿ– ಜನಗಣತಿ’ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ವೀರಶೈವ ಧರ್ಮ ಪ್ರಾಚೀನ ಇತಿಹಾಸ, ಪರಂಪರೆ ಹೊಂದಿದೆ. ಸೈದ್ಧಾಂತಿಕ ನೆಲೆ ಮೂಲಗಳನ್ನು ಅರಿಯದ ಕೆಲವರು ವೀರಶೈವ ಲಿಂಗಾಯತ ಸಂಸ್ಕೃತಿಯನ್ನು ಕಲುಷಿತಗೊಳಿಸುತ್ತಿದ್ದಾರೆ. ಅಂಥವರ ಮಾತಿಗೆ ಬಲಿಯಾಗದೆ, ವೀರಶೈವ ಲಿಂಗಾಯತ ಸಮಗ್ರತೆ ಉಳಿಸಿ ಬೆಳೆಸಿಕೊಂಡು ಬರುವ ಅಗತ್ಯವಿದೆ. ರೇಣುಕಾದಿ ಪಂಚಾಚಾರ್ಯರು ಮತ್ತು ಬಸವಾದಿ ಶರಣರ ವಿಚಾರಧಾರೆಗಳು ಒಂದೇ ಆಗಿವೆ. ವೀರಶೈವ ಧರ್ಮವಾಚಕ ಸೈದ್ಧಾಂತಿಕ ಸಮಗ್ರ ಪದ. ಲಿಂಗಾಯತ ಅನ್ನುವುದು ರೂಢಿಯಿಂದ ಸಹಜವಾಗಿ ಬಂದ ಪದವಾಗಿದೆ. ಇವೆರಡರಲ್ಲಿ ದ್ವಂದ್ವ ಉಂಟು ಮಾಡಬಾರದೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಪಷ್ಟಪಡಿಸಿದೆ’ ಎಂದರು.
‘ಮಹಾಸಭೆಯ ನಿರ್ಣಯವನ್ನು ದಾವಣಗೆರೆ ಶೃಂಗ ಸಮ್ಮೇಳನದಲ್ಲಿ ಪಂಚ ಪೀಠಾಧೀಶರು ಬೆಂಬಲಿಸಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದ ಹಿನ್ನೆಲೆ ಕೆಲವರು ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಹೇಳುತ್ತಿರುವುದು ಬಸವಣ್ಣನವರ ವಿಚಾರಧಾರೆಗಳಿಗೆ ವಿರುದ್ಧವಾಗಿದೆ. ಬಸವಣ್ಣನವರ ಸಮಷ್ಟಿ ಪ್ರಜ್ಞೆಯ ವಿಚಾರಧಾರೆಗೂ ಇಂದಿನ ದಿನ ಬಸವಣ್ಣನವರ ಹೆಸರಿನಲ್ಲಿ ಒಡಕು ಉಂಟು ಮಾಡುತ್ತಿರುವ ವಿಚಾರ ಧಾರೆಗಳಿಗೂ ಸಂಬಂಧವೇ ಇಲ್ಲ. ಇಂಥ ಸಂದರ್ಭ ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಈ ಸಮಾವೇಶಕ್ಕೆ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಮತ್ತು ಕಾಶೀ ಸ್ವಾಮೀಜಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ರಂಭಾಪುರಿ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.