ADVERTISEMENT

ಸೊಪ್ಪು ಬೆಲೆ ಏರಿಕೆ, ತರಕಾರಿ ಇಳಿಕೆ

ಹವಾಮಾನ ವ್ಯತ್ಯಯದ ಕಾರಣ ಪೂರೈಕೆಯೂ ಏರಿಳಿತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 6:24 IST
Last Updated 2 ಡಿಸೆಂಬರ್ 2022, 6:24 IST
ಚಿಲ್ಲರೆ ಮಾರಾಟಕ್ಕೆ ಬಂದ ಸೊಪ್ಪುಗಳು
ಚಿಲ್ಲರೆ ಮಾರಾಟಕ್ಕೆ ಬಂದ ಸೊಪ್ಪುಗಳು   

ಕಡೂರು: ತರಕಾರಿಗಳ ಬೆಲೆ ಒಂದಿಷ್ಟು ಸ್ಥಿರವಾದಂತೆ ಕಂಡುಬಂದರೂ, ಸೊಪ್ಪು ಪೂರೈಕೆ ಕಡಿಮೆಯಾಗಿದ್ದು, ಬೆಲೆ ಹೆಚ್ಚುತ್ತಲೇ ಇದೆ.

ತಾಲ್ಲೂಕಿನಲ್ಲಿ ರೈತರು ಹೆಚ್ಚಾಗಿ ಕೊತ್ತಂಬರಿ ಮತ್ತು ಪಾಲಕ್ ಸೊಪ್ಪು ಬೆಳೆಯುತ್ತಾರೆ. ಕೊತ್ತಂಬರಿ ಸೊಪ್ಪು ಸಗಟು ದರದಲ್ಲಿ ನೂರು ಕಂತೆಗೆ ₹400 ಇದೆ.( ನೂರಕ್ಕೆ ಹತ್ತು ಕಟ್ಟು ಸೊಪ್ಪನ್ನು ವ್ಯಾಪಾರಿಗಳಿಗೆ ನೀಡಬೇಕಿದೆ). ಚಿಲ್ಲರೆಯಾಗಿ ಒಂದು ಕಟ್ಟಿಗೆ ₹5ರಂತೆ ಮಾರಾಟವಾಗುತ್ತಿದೆ. ಅದರಲ್ಲೂ ನಾಟಿ ಸೊಪ್ಪಿಗೆ ಹೆಚ್ಚು ಬೇಡಿಕೆಯಿದೆ. ಹೈಬ್ರೀಡ್ ಸೊಪ್ಪು ಕಟ್ಟಿಗೆ ₹10 ಬೆಲೆಯಿದೆ.

ಕೀರೆ, ದಂಟು ಸೊಪ್ಪುಗಳೂ ₹20ಕ್ಕೆ 3ರಿಂದ 4 ಕಟ್ಟು ಮಾರಾಟವಾಗುತ್ತಿದೆ. ಭದ್ರಾವತಿ, ಬೆಂಗಳೂರಿಗೆ ಸಗಟು ವರ್ತಕರು ಸೊಪ್ಪನ್ನು ಪೂರೈಸುತ್ತಾರೆ. ಆದರೆ ರೈತರು ತಾವೇ ಭದ್ರಾವತಿ, ಚಿಕ್ಕಮಗಳೂರು ಮುಂತಾದೆಡೆಗೆ ಹೋಗಿ ಸೊಪ್ಪನ್ನು ವಿಕ್ರಯಿಸಿ ಬರುತ್ತಾರೆ. ಹೆಚ್ಚಾಗಿ ಸ್ಥಳೀಯವಾಗಿಯೇ ದಿನಕ್ಕೆ ನೂರಿನ್ನೂರು ಕಟ್ಟು ಸೊಪ್ಪು ಮಾರುವವರೇ ಹೆಚ್ಚಿದ್ದಾರೆ.

ADVERTISEMENT

ಪಾಲಕ್ ಸೊಪ್ಪು ಬೆಳೆಯುವ ರೈತರು ಹೆಚ್ಚಾಗಿ ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ. ಈ ಸೊಪ್ಪನ್ನು ಹೆಚ್ಚು ದಿನ ಇಡಲು ಬಾರದ ಕಾರಣ ಬೇಡಿಕೆ ಆಧರಿಸಿ ಅಗತ್ಯವಿದ್ದಷ್ಟೇ ಸೊಪ್ಪನ್ನು ರೈತರು ಕಿತ್ತು ಕಂತೆ ಕಟ್ಟಿ ಮಾರಾಟ ಮಾಡುತ್ತಾರೆ. ಮೆಂತ್ಯ ಸೊಪ್ಪು ಹೆಚ್ಚು ಸಿಗುತ್ತಿಲ್ಲ.

ಹವಾಮಾನ ವ್ಯತ್ಯಯದಿಂದಾಗಿಸೊಪ್ಪುಗಳಿಗೆ ಉತ್ತಮ ಬೆಲೆಯಿದ್ದರೂ ಪೂರೈಕೆ ಕಡಿಮೆಯಾಗಿದೆ. ಕೊತ್ತಂಬರಿ, ಪಾಲಕ್ ಮುಂತಾದ ಸೊಪ್ಪುಗಳಿಗೆ ಹೆಚ್ಚು ಬಿಸಿಲು ಅಥವಾ ಹೆಚ್ಚು ಚಳಿ ಉತ್ತಮವಲ್ಲ. ಈಚೆಗೆ ಬೆಳಿಗ್ಗೆ ಹೊತ್ತು ಹೆಚ್ಚು ಬಿಸಿಲು, ರಾತ್ರಿ ವೇಳೆ ಸ್ವಲ್ಪ ಚಳಿ ಮತ್ತು ಬೆಳಿಗ್ಗೆ ಬೀಳುವ ಮಂಜು ಸೊಪ್ಪುಗಳ ಗುಣಮಟ್ಟ ಹಾಳು ಮಾಡುತ್ತದೆ ಎನ್ನುತ್ತಾರೆ ಸೊಪ್ಪು ವ್ಯಾಪಾರಿ ರಾಜಪ್ಪ.

ತರಕಾರಿ ಬೆಲೆ ಕಳೆದ ವಾರಕ್ಕಿಂತ ಈ ವಾರ ಒಂದಿಷ್ಟು ಕಡಿಮೆಯಾಗಿದೆ. ಟೊಮೆಟೋ ಬೆಲೆ ₹14(ಬಾದಾಮಿ) ಮತ್ತು ₹16( ಹುಳಿ)ಕ್ಕೆ ಸಿಗುತ್ತಿದೆ. 15 ಕೆ.ಜಿ.ಯ ಒಂದು ಬಾಕ್ಸ್ ₹50 ರಿಂದ ₹60 ಸಗಟು ಬೆಲೆಯಿದೆ. ನುಗ್ಗೆಕಾಯಿ ಮಾತ್ರ ಸ್ವಲ್ಪ ಹೆಚ್ಚು ಎನ್ನುವಷ್ಟು ಬೆಲೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.