ADVERTISEMENT

ಚಿಕ್ಕಮಗಳೂರು ಜಿಲ್ಲೆಗೆ ಪಂಪ್‌ವೆಲ್‌ಗೆ ನಿರ್ಬಂಧ: ಬಿಜೆಪಿ, ವಿಎಚ್‌ಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:23 IST
Last Updated 8 ಜುಲೈ 2025, 4:23 IST
ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು
ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು   

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಒಂದು ತಿಂಗಳ ಕಾಲ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಿರುವ ಜಿಲ್ಲಾಧಿಕಾರಿ ಕ್ರಮ ಖಂಡಿಸಿ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮಾಹಿತಿ ಆಧರಿಸಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿಯ ಪೊಲೀಸ್ ವೃತ್ತದಲ್ಲಿ ಬ್ಯಾರಿಕೇಡ್ ನಿರ್ಮಿಸಿಕೊಂಡಿದ್ದರು. ಬಿಜೆಪಿ ಕಚೇರಿಯಿಂದ ಬಂದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಅವರು 5 ಜನ ಮಾತ್ರ ಒಳಗೆ ಹೋಗಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಬಹುದು ಎಂದು ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು 10 ಜನರಿಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ವಾಗ್ವಾದದ ಬಳಿಕ 10 ಜನರಿಗೆ ಅವಕಾಶ ನೀಡಲಾಯಿತು. 

ADVERTISEMENT

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ, ‘ಯಾವುದೇ ಹೋರಾಟ ಹಾಗೂ ಪ್ರತಿಭಟನೆಗೆ ಶರಣ್ ಪಂಪ್‌ವೆಲ್ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಸಂಘಟನೆಯ ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಲು ಅಲ್ಲಲ್ಲಿ ಬೈಟೆಕ್‌ ನಡೆಸಲಾಗುತ್ತಿದ್ದು, ಅದರಲ್ಲಿ ಅವರು ಭಾಗವಹಿಸಬೇಕಿತ್ತು. ಮೂಡಿಗೆರೆ, ಆಲ್ದೂರು, ಚಿಕ್ಕಮಗಳೂರಿನಲ್ಲಿ ಒಳಾಂಗಣದಲ್ಲಿ ಬೈಠಕ್ ಆಯೋಜನೆಯಾಗಿತ್ತು. ಆದರೆ, ಏಕಾಏಕಿ ಜಿಲ್ಲಾಧಿಕಾರಿ ನಿರ್ಬಂಧ ಹೇರಿರುವುದು ನೋವು ತಂದಿದೆ’ ಎಂದರು.

‘ಈ ಹಿಂದೆ ಜಿಲ್ಲೆಗೆ ಅವರು ಬಂದ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂಜೆಯ ಒಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

ಈ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಬಜರಂಗದಳ ಸಹ ಸಂಯೋಜಕ ಶ್ಯಾಮ್, ಅಮಿತ್, ಕೃಷ್ಣ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  

ಬಿಗಿ ಬಂದೋಬಸ್ತ್: ಹೆಚ್ಚಿನ ಪೊಲೀಸರ ನಿಯೋಜನೆ

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮಾಹಿತಿ ತಿಳಿದಿದ್ದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕ್ರೀಡಾಂಗಣದ ಕಡೆಗೆ ಹೋಗಬೇಕಿದ್ದ ಜನರಿಗೂ ಅವಕಾಶ ಇಲ್ಲವಾಗಿತ್ತು. 200 ಹೆಚ್ಚು ಪೊಲಿಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಅಗ್ನಿಶಾಮಕ ವಾಹನ ಎರಡು ಬಸ್‌ಗಳನ್ನೂ ಪ್ರತಿಭಟನಾ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ಕಾರನ್ನೂ ಪೊಲೀಸರು ತಡೆದು ನಿಲ್ಲಿಸಿದರು. ಪೊಲೀಸರ ವಿರುದ್ಧ ಅವರು ಸಿಡಿಮಿಡಿಗೊಂಡ ಬಳಿಕ ಬ್ಯಾರಿಕೇಡ್‌ ತೆಗೆದು ಒಳಕ್ಕೆ ಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.