ADVERTISEMENT

ಬರದಲ್ಲೂ ನಳನಳಿಸುತ್ತಿರುವ ವಿಷ್ಣು ಸಮುದ್ರ

​ಪ್ರಜಾವಾಣಿ ವಾರ್ತೆ
Published 11 ಮೇ 2024, 6:16 IST
Last Updated 11 ಮೇ 2024, 6:16 IST
ಬರಗಾಲದಲ್ಲೂ ನಳನಳಿಸುತ್ತಿರುವ ವಿಷ್ಣುಸಮುದ್ರ ಕೆರೆ
ಬರಗಾಲದಲ್ಲೂ ನಳನಳಿಸುತ್ತಿರುವ ವಿಷ್ಣುಸಮುದ್ರ ಕೆರೆ   

ಕಡೂರು: ಒಮ್ಮೆ ತುಂಬಿದರೆ ಮೂರ್ನಾಲ್ಕು ವರ್ಷ ನೀರಿಗೆ ಬರವಿಲ್ಲ ಎಂಬ ಮಾತು ತಾಲ್ಲೂಕಿನ ಕೆರೆಸಂತೆ ಬಳಿಯ ವಿಷ್ಣು ಸಮುದ್ರ ಕೆರೆ ವಿಚಾರದಲ್ಲಿ ನಿಜವಾಗಿದೆ. ತಾಲ್ಲೂಕಿನ ಬಹುತೇಕ ಕೆರೆಗಳು ಖಾಲಿಯಾಗಿದ್ದರೂ ವಿಷ್ಣು ಸಮುದ್ರ ಕೆರೆಯಲ್ಲಿ ಶೇ70 ನೀರು ಇರುವುದು ತುಂಬಿದೆ. ಅಲ್ಲಿನ ರೈತರು ತೆಗೆದುಕೊಂಡ ನಿರ್ಧಾರವೇ ಇದಕ್ಕೆ ಮುಖ್ಯ ಕಾರಣವಾಗಿದೆ.

ಕಡೂರು ಪಟ್ಟಣದಿಂದ ಸುಮಾರು 10 ಕಿ.ಮೀ.ದೂರದಲ್ಲಿರುವ ಹೇಮಗಿರಿ ಬೆಟ್ಟದ ಬಳಿಯ ಈ ಕೆರೆ ಸುಮಾರು 500 ಹೆಕ್ಟೇರ್ ಪ್ರದೇಶ ಹೊಂದಿದೆ. ಹೊಯ್ಸಳ ದೊರೆ ವಿಷ್ಣುವರ್ಧನ 400 ಬ್ರಾಹ್ಮಣ ಕುಟುಂಬಗಳ ಅಗ್ರಹಾರ ಸ್ಥಾಪಿಸಿ ಅಲ್ಲಿ ಶೈವ, ವೈಷ್ಣವ ದೇವಸ್ಥಾನಗಳನ್ನು ನಿರ್ಮಾಣ ಮಾಡಿ, ಹೇಮಾವತಿ ಪಟ್ಟಣ ಎಂದು ಹೆಸರಿಟ್ಟರು (ಅದೇ ಈಗ ಕೆರೆಸಂತೆಯಾಗಿದೆ). ಇಲ್ಲಿಯೇ ವಿಶಾಲ ಕೆರೆ ನಿರ್ಮಿಸಿ ಅದಕ್ಕೆ ವಿಷ್ಣುಸಮುದ್ರ ಎಂದು‌ ಹೆಸರಿಟ್ಟ ಎಂಬುದಕ್ಕೆ ಶಾಸನಗಳ ಆಧಾರಗಳಿವೆ.

ಕ್ರಿ.ಶ.1259ರಲ್ಲಿ ಮಹಾವಡ್ಡಬೆವಹಾರಿ ಸೋವಾಸಿ ಮಾಧವ ಭಟ್ಟಯ್ಯರ ಮಗ ಅಲ್ಲಾಳದೇವನು ವಿಷ್ಣುಸಮುದ್ರ ಕೆರೆ ನಿರ್ವಹಣೆಗೆ 200 ಗದ್ಯಾಣವನ್ನು ದಾನ ನೀಡಿದ್ದರು. ಇದರ ಬಡ್ಡಿಯ 30 ಗದ್ಯಾಣದಿಂದ ಪ್ರತಿವರ್ಷ ಕೆರೆ ತೂಬು ದುರಸ್ತಿ ನಿರ್ವಹಿಸಲಾಗುತ್ತಿದೆ ಎಂದು ಇಲ್ಲಿನ ಒಂದು ಶಾಸನ‌ ಉಲ್ಲೇಖಿಸಿದೆ. ಕೆರೆಯ ಒಂದು ಭಾಗದಲ್ಲಿ ಕೆರೆಸಂತೆ, ಮತ್ತೊಂದು ಭಾಗದಲ್ಲಿ ಹೇಮಗಿರಿ ಗ್ರಾಮಗಳಿವೆ. ಇತಿಹಾಸ ಪ್ರಸಿದ್ಧ ಮಲ್ಲಿಕಾರ್ಜುನ, ಮಹಾಲಕ್ಷ್ಮಿ, ಜನಾರ್ದನ ದೇವಸ್ಥಾನಗಳಿವೆ.

ADVERTISEMENT

ದೇವನೂರು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಈ ಕೆರೆಗೆ ಬರುತ್ತದೆ. ಉತ್ತಮ ಮಳೆಯಾದರೆ ಕೆರೆಯ ಸುತ್ತಲಿನ ಗುಡ್ಡ ಸಾಲುಗಳ ನೀರು ಈ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಈ ಕೆರೆಯ ನೀರು ಯಗಟಿ ಸಿಂಗಟಗೆರೆ, ಪಂಚನಹಳ್ಳಿ ಹೋಬಳಿಗಳ ಅಂತರ್ಜಲ ಮಟ್ಟ ಉತ್ತಮಗೊಳ್ಳಲು ಪೂರಕವಾಗಿದೆ. ಇದು ರೈತರ ಜೀವನಾಡಿಯಾಗಿದ್ದು, ವನ್ಯಜೀವಿಗಳಿಗೆ ಆಸರೆಯಾಗಿದೆ.

ಇಂಥ ಐತಿಹಾಸಿಕ ಮಹತ್ವದ ಕೆರೆ 2022ರಲ್ಲಿ 14 ವರ್ಷಗಳ ನಂತರ ತುಂಬಿತ್ತು. ಅದಕ್ಕೂ ಮುನ್ನ ಈ ಕೆರೆ ಬರಗಾಲದಿಂದ ಒಣಗಿತ್ತು. 2016ರ ಭೀಕರ ಬರಗಾಲದ ಸಮಯದಲ್ಲಿ ಇದ್ದಕ್ಕಿಂದ್ದಂತೆ ಈ ಕೆರೆ ಪ್ರದೇಶದಲ್ಲಿ ಎಲ್ಲಿ ಬಗೆದರೂ ನೀರು ಉಕ್ಕುತ್ತಿತ್ತು.

ಈ ಕೆರೆ ಹತ್ತು ವರ್ಷಕ್ಕೊಮ್ಮೆ‌ ತುಂಬುತ್ತದೆ ಎಂಬುದು ಇಲ್ಲಿನ ಸ್ಥಳೀಯರ ನಂಬಿಕೆ. ಹಾಗಾಗಿ ತುಂಬಿದ ಕೆರೆಯಲ್ಲಿ ಸದಾ ನೀರಿದ್ದರೆ ಅಂತರ್ಜಲ ಮಟ್ಟ ಸ್ಥಿರವಾಗಿರುತ್ತದೆ ಎಂಬ ಕಾರಣದಿಂದ ಸರ್ಕಾರ ತೂಬು ಎತ್ತುವುದನ್ನು ನಿರ್ಬಂಧಿಸಿದೆ. ರೈತರೇ ಸ್ವಯಂ ಪ್ರೇರಿತರಾಗಿ ಸಹಮತ ಸೂಚಿಸಿದ್ದಾರೆ. ಹಾಗಾಗಿಯೇ ಬರದಲ್ಲೂ ಕೆರೆಯಲ್ಲಿ ನೀರಿದೆ.

ಕೆರೆ ತೂಬು ತೆಗೆಯದಿರುವ ಸರ್ಕಾರದ ನಿರ್ಧಾರ ಬೆಂಬಲಿಸಿರುವ ರೈತರ ಸಹಕಾರದಿಂದ ಈಗಲೂ ಕೆರೆಯಲ್ಲಿ ನೀರು ತುಂಬಿದೆ

-ಮಂಜುನಾಥ್, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌

ತೂಬು ತೆಗೆದರೆ ಕೆರೆ ನೀರು ವ್ಯರ್ಥವಾಗುತ್ತದೆ. ಕೆರೆಯಲ್ಲಿ ಸದಾ ಕಾಲ ನೀರಿದ್ದರೆ ಸುಮಾರು 20 ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲ ಸ್ಥಿರವಾಗಿರುತ್ತದೆ.

-ಕೆರೆಸಂತೆ ಮಂಜುನಾಥ್, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.