ಚಿಕ್ಕಮಗಳೂರು: ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ದೂರದೃಷ್ಟಿ ಮತ್ತು ಆದರ್ಶ ಎಲ್ಲರ ಬದುಕಿಗೆ ಪ್ರೇರಣೆಯಾದರೆ ಭಾರತವನ್ನು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಕಟ್ಟಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು ಸಿವಿಲ್ ಎಂಜಿನಿಯರ್ಸ್ ಸಂಘದಿಂದ ವಿಶ್ವೇಶ್ವರಯ್ಯ ಅವರ ಜನ್ಮ ದಿನ ಆಚರಣೆ ಅಂಗವಾಗಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿನ ಲೋಕೋಪಯೋಗಿ ಇಲಾಖೆಯ ಮುಂಭಾಗದ ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತಾಡಿದರು.
‘ವಿಶ್ವೇಶ್ವರಯ್ಯ ಅವರ ಬುದ್ಧಿವಂತಿಕೆ ಮತ್ತು ಪರಿಶ್ರಮದ ವ್ಯಕ್ತಿತ್ವ ಜತೆಗೆ ಸಮಾಜಮುಖಿ ಚಿಂತನೆಗಳು ಯುವ ಎಂಜಿನಿಯರ್‌ಗಳಿಗೆ ಪ್ರೇರಣೆ. ವೃತ್ತಿ ಬದುಕಿನಲ್ಲಿ ಯಾವುದೇ ರೀತಿಯ ಪ್ರಶ್ನಾರ್ಥಕ ಚಿಹ್ನೆಗೆ ಅವಕಾಶ ನೀಡದೇ ಬಾಳಿ ಬದುಕಿದವರು ವಿಶ್ವೇಶ್ವರಯ್ಯ. ಹಾಗಾಗಿಯೇ ಅವರನ್ನು ಭಾರತರತ್ನ ಗೌರವವನ್ನು ಸರ್ಕಾರ ನೀಡಿದೆ’ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಜೋಡಿ ಹಲವು ಶಾಶ್ವತ ಯೋಜನೆಗಳಿಗೆ ಅಡಿಪಾಯ ಹಾಕಿದೆ. ಕನ್ನಂಬಾಡಿ ಜಲಾಶಯ ಕಟ್ಟಿದರು. ಮೈಸೂರು ಬ್ಯಾಂಕ್, ಕಬ್ಬಿಣದ ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆ, ಎಂಜಿನಿಯರಿಂಗ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಹೀಗೆ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಮೈಸೂರು ಪ್ರಾಂತ್ಯವನ್ನು ಉತ್ತುಂಗ ಸ್ಥಿತಿಗೆ ಏರಿಸಲು ಇಬ್ಬರೂ ಕಾರಣರಾದರು ಎಂದು ತಿಳಿಸಿದರು.
ಉತ್ತಮ ಪ್ರಜಾಪ್ರಭುತ್ವವನ್ನು ಕಟ್ಟ ಕಡೆಯ ಜನರಿಗೆ ತಲುಪಿಸಲು ಸ್ವಾಮಿ ವಿವೇಕಾನಂದ, ಸರ್.ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬದುಕೇ ಆದರ್ಶ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ‘ವಿಶ್ವೇಶ್ವರಯ್ಯ ಅವರು ಕೊಟ್ಟಿರುವ ಹಲವು ಯೋಜನೆಗಳು ಹಾಗೂ ಅವರಿಗಿದ್ದ ಸಾಮಾಜಿಕ ಕಳಕಳಿಗೆ ಸಾಕ್ಷಿ. ಇಂತಹ ಮಹನೀಯರ ಹಾದಿಯಲ್ಲಿ ನಡೆದಾಗ ಮಾತ್ರ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ’ ಎಂದರು.
ಚಿಕ್ಕಮಗಳೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಶಿವು ಪ್ರಕಾಶ್, ಜಿಲ್ಲಾ ಸಿವಿಲ್ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಜಿ.ಎಲ್. ಶಶಿಧರ್, ಕಾರ್ಯದರ್ಶಿ ವಿರೂಪಾಕ್ಷ, ಮಾಜಿ ಅಧ್ಯಕ್ಷ ಜಿ. ರಮೇಶ್, ಖಜಾಂಚಿ ಎಚ್.ಎಸ್. ಕಿರಣ್, ಕಾರ್ಯಕ್ರಮದ ಸಂಯೋಜಕ ಎ.ಎನ್. ಸತ್ಯನಾರಾಯಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಡಿ.ಎ.ಸಿ.ಜಿ. ಕಾಲೇಜಿನಿಂದ ವಿಶ್ವೇಶ್ವರಯ್ಯ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.