ADVERTISEMENT

ತರಾತುರಿ ಮಾಡಲ್ಲ, ಕಾದು ನೋಡುವ: ಸಿ.ಟಿ.ರವಿ

ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 14:14 IST
Last Updated 7 ಜುಲೈ 2019, 14:14 IST
ಸಿ.ಟಿ.ರವಿ 
ಸಿ.ಟಿ.ರವಿ    

ಚಿಕ್ಕಮಗಳೂರು: ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಘಟಾನುಘಟಿ ಶಾಸಕರು ರಾಜೀನಾಮೆ ಕೊಟ್ಟಿರುವುದು ಆಶ್ಚರ್ಯದ ಸತ್ಯ. ಸ್ಪೀಕರ್‌ ಏನು ನಿರ್ಧಾರ ತೆಗೆದುಕೊಳ್ಳುತ್ತಾರೊ ಗೊತ್ತಿಲ್ಲ, ಕಾದು ನೋಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ, ಜೆಡಿಎಸ್‌ನಲ್ಲಿ ಈ ಹಿಂದೆ ರಾಜ್ಯಾಧ್ಯಾಕ್ಷರಾಗಿದ್ದ ಅಡಗೂರು ಎಚ್‌.ವಿಶ್ವನಾಥ್‌ ಅಂಥವರು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಟಿರುವುದು ಸಂತೋಷ ತಂದಿದೆ’ ಎಂದು ಉತ್ತರಿಸಿದರು.

‘ರಾಜಕೀಯ ಕಾರಣಕ್ಕೆ ರಾಜೀನಾಮೆ ಕೊಟ್ಟಿರಲಿಕ್ಕಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿ, ಅಪಮಾನದಿಂದ ನೊಂದು ರಾಜೀನಾಮೆ ಈ ನಿರ್ಧಾರ ಕೈಗೊಂಡಿರಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಸ್ಪೀಕರ್‌ ಅಂಗೀಕರಿಸುತ್ತಾರೋ, ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಜೀನಾಮೆ ನೀಡಿದ ಯಾರನ್ನೂ ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ನಮಗೆ ಹಪಾಹಪಿ ಇಲ್ಲ’ ಎಂದರು.

‘ಹಿರಿಯ ನಾಯಕರೇ ರಾಜೀನಾಮೆ ನೀಡಿದ್ದಾರೆ. ಏನಾಗಿದೆ ಎಂಬ ಬಗ್ಗೆ ಆ ಪಕ್ಷಗಳವರು ಅವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇನ್ನಷ್ಟು ಅವನತಿ ಕಡೆಗೆ ಸಾಗುತ್ತಾರೆ’ ಎಂದರು.

‘ಹೀಗೆ ಮಾಡಬೇಕು ಎಂದು ನಮಗೆ ಯಾವ ನಿರ್ದೇಶನವೂ ಇಲ್ಲ. ರಾಜ್ಯಕ್ಕೆ ಅನುಕೂಲವಾಗುವಂಥ ಮತ್ತು ಪಕ್ಷದ ಹಿತಕ್ಕೆ ಧಕ್ಕೆಯಾಗದಂಥ ನಿರ್ಣಯವನ್ನು ಬಿಜೆಪಿ ಕೈಗೊಳ್ಳಲಿದೆ’ ಎಂದು ಉತ್ತರಿಸಿದರು.

‘ಕೆಲವರಿಗೆ ಏನಾದರೂ ಮಾಡಿ ಅಧಿಕಾರದಲ್ಲಿ ಉಳಿಯಬೇಕು ಎಂಬ ಭಂಡತನ ಇರುತ್ತದೆ. 37ಸ್ಥಾನಕ್ಕೆ ಮುಖ್ಯಮಂತ್ರಿಯಾಗುವ 13 ತಿಂಗಳು ಇತ್ತು. ಇನ್ನು ಎಷ್ಟು ತಿಂಗಳು ಇರುತ್ತಾರೆ ನೋಡೋಣ. ಯೋಗ ಎಷ್ಟು ಕಾಲದವರೆಗೆ ಇರುತ್ತದೆ. ಮುಗಿದಿದ್ದರೆ ಅಧಿಕಾರ ಬಿಡಲೇಬೇಕಲ್ಲ’ ಎಂದು ಪರೋಕ್ಷವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಚುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.