ADVERTISEMENT

ಬಿಸಿಲ ತಾಪ: ತಂಪೆರೆಯುತ್ತಿರುವ ಕಬ್ಬು, ಕಲ್ಲಂಗಡಿ

ಬಾಲು ಮಚ್ಚೇರಿ
Published 6 ಏಪ್ರಿಲ್ 2024, 7:39 IST
Last Updated 6 ಏಪ್ರಿಲ್ 2024, 7:39 IST
ಮಾರಾಟಕ್ಕೆ ಬಂದಿರುವ ಹೈಬ್ರಿಡ್ ತಳಿ ಕಲ್ಲಂಗಡಿ‌ಹಣ್ಣು
ಮಾರಾಟಕ್ಕೆ ಬಂದಿರುವ ಹೈಬ್ರಿಡ್ ತಳಿ ಕಲ್ಲಂಗಡಿ‌ಹಣ್ಣು   

ಕಡೂರು: ಬಿಸಿಲ ಬೇಗೆಯಿಂದ ಬಳಲುತ್ತಿರುವವರಿಗೆ ಕಬ್ಬಿನ ಹಾಲು ಮತ್ತು ಕಲ್ಲಂಗಡಿ ಹಣ್ಣು ತಂಪೆರೆಯುತ್ತಿವೆ. ಪಟ್ಟಣದ ಹತ್ತಾರು ಕಡೆ ಕಲ್ಲಂಗಡಿ ಮತ್ತು ಕಬ್ಬಿನ ಹಾಲಿನ ಅಂಗಡಿಗಳು ತಲೆ ಎತ್ತಿವೆ. ಕಡೂರು ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿತ್ತು. ಆದರೆ, ಮಳೆ ಕೊರತೆಯಿಂದ ಈಗ ಬೆಳೆ ವಿರಳವಾಗಿದೆ. ರೈತರು ಇತರೆ ಬೆಳೆಗಳತ್ತ ಗಮನ ಹರಿಸಿದ್ದಾರೆ.

ಕಲ್ಲಂಗಡಿ ಹಣ್ಣು ಮಾರಾಟ ಮಾಡುವವರು ಚೆನ್ನರಾಯಪಟ್ಟಣ, ಹಾಸನದಿಂದ ಹಣ್ಣು ತರಿಸುತ್ತಾರೆ. ₹12 ರಿಂದ ₹13 ಸಾವಿರಕ್ಕೆ ಒಂದು ಟನ್ ಕಲ್ಲಂಗಡಿ ತರಿಸುತ್ತಾರೆ. ಸಂಕರಣ ತಳಿಯ (ಹೈಬ್ರಿಡ್) ಹಣ್ಣು ₹12 ರಿಂದ ₹15 ಸಾವಿರಕ್ಕೆ ಒಂದು ಟನ್ ದೊರೆಯುತ್ತದೆ. ಒಮ್ಮಲೆ ಮೂರರಿಂದ ನಾಲ್ಕು ಟನ್ ತರಿಸುವ ವ್ಯಾಪಾರಿಗಳು ಅದನ್ನು  ಕೆ.ಜಿ ಲೆಕ್ಕದಲ್ಲಿ ಮತ್ತು ಕೊಯ್ದು ಪ್ಲೇಟ್ ಲೆಕ್ಕದಲ್ಲಿ ಮಾರುತ್ತಾರೆ. ಒಂದು ಪ್ಲೇಟ್‌ಗೆ ₹20 ಬೆಲೆ ಇದೆ. ನಾಲ್ಕರಿಂದ ಐದು ಕೆಜಿ ತೂಕದ ಒಂದು ಹಣ್ಣು ಕೊಯ್ದರೆ ಕನಿಷ್ಠ 10 ಪ್ಲೇಟ್‌ ಆಗುವಷ್ಟು  ಸಿಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಹೆಚ್ಚಿನವರು ಕೊಯ್ದು ಇಟ್ಟ ಹಣ್ಣನ್ನು ತಿನ್ನುತ್ತಾರೆ. ಮತ್ತೆ ಕೆಲವರು ಇಡೀ ಹಣ್ಣನ್ನೇ ಕೊಂಡೊಯ್ಯುತ್ತಾರೆ. ಕಲ್ಲಂಗಡಿ ನಾಟಿ ತಳಿಗೆ ಕೆಜಿಗೆ ₹30, ಹೈಬ್ರಿಡ್ ಹಣ್ಣಿಗೆ ಒಂದು ಕೆಜಿಗೆ ₹25 ಬೆಲೆ ಇದೆ. ನಾಲ್ಕರಿಂದ ಎಂಟು ಕೆ.ಜಿ.ತೂಗುವ ಹಣ್ಣುಗಳಿವೆ.

ADVERTISEMENT

ಬಿಸಿಲ ಝಳಕ್ಕೆ ದಾಹ ತಣಿಸಲು ಕಬ್ಬಿನ ಹಾಲಿನ ಅಂಗಡಿಗಳು ರಸ್ತೆಯಂಚಿನಲ್ಲಿ ತಲೆ ಎತ್ತಿವೆ. ತಳ್ಳು ಗಾಡಿಗಳಲ್ಲಿ ಚಿಕ್ಕ ಯಂತ್ರದ ಗಾಣವನ್ನಿಟ್ಟುಕೊಂಡು ಕಬ್ಬು ಅರೆದು ಹಾಲು ಮಾರುವವರು ಇದ್ದಾರೆ. ಕಬ್ಬನ್ನು ಮಂಡ್ಯ, ಚೆನ್ನರಾಯಪಟ್ಟಣ, ಪಾಂಡವಪುರ ಕಡೆಯಿಂದ ತರಿಸುತ್ತಾರೆ. ಒಂದು ಟನ್ ಕಬ್ಬಿಗೆ ₹250ರಿಂದ ₹300 ಕೊಟ್ಟು ತರುತ್ತಾರೆ. ಒಂದು ಕಬ್ಬಿನ ಕೋಲಿನಲ್ಲಿ ಕನಿಷ್ಟ 2 ಲೋಟದಷ್ಟು ಹಾಲು ಸಿಗುತ್ತದೆ. ಕಬ್ಬಿನ‌ ರಸಕ್ಕೆ ನಿಂಬೆಹಣ್ಣಿನ ರಸ, ಮೆಣಸಿನ‌ಕಾಯಿ,‌ ಶುಂಠಿ ಬೆರೆಸಿ ಮಾರುತ್ತಾರೆ. ಒಂದು ಲೋಟ ಕಬ್ಬಿನ ರಸಕ್ಕೆ ₹20 ಬೆಲೆಯಿದೆ.

ಮಲ್ಜೇಶ್ವರ ರಸ್ತೆಯಲ್ಲಿ ಕಬ್ಬಿನ ಹಾಲು ವ್ಯಾಪಾರಿ
ಕಲ್ಲಂಗಡಿ ಹಣ್ಣನ್ನು ಚೆನ್ನರಾಯಪಟ್ಟಣದಿಂದ ಟನ್ ಲೆಕ್ಕದಲ್ಲಿ ಖರೀದಿಸಿ ತರುತ್ತೇವೆ. ಸದ್ಯ ಬೇಸಿಗೆ ಇರುವುದರಿಂದ ಉತ್ತಮ ಲಾಭ ಸಿಗುತ್ತಿದೆ.
- ಮೊಹಮದ್ ಕಮರುದ್ದೀನ್. ಕಲ್ಲಂಗಡಿ ವ್ಯಾಪಾರಿ. ಕಡೂರು.
ಎರಡು ವರ್ಷಗಳಿಂದ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದೇನೆ. ನಾಟಿ ಕಬ್ಬಿನ ಹಾಲಿಗೆ ಸಿಹಿ ಹೆಚ್ಚು. ಆದರೆ ನಾಟಿ ಕಬ್ಬು ಸಿಗುವುದು ಕಷ್ಟ
ದತ್ತುಸೇಟ್ ಕಬ್ಬಿನ ಹಾಲಿನ ವ್ಯಾಪಾರಿ. ಮಲ್ಲೇಶ್ವರ ರಸ್ತೆ.

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.