ADVERTISEMENT

ವಸತಿ ರಹಿತರು ತಿರಂಗಾ ಹಾರಿಸುವುದು ಎಲ್ಲಿ?- ಪಿಚ್ಚಳ್ಳಿ ಶ್ರೀನಿವಾಸ್

ಸರ್ಕಾರಕ್ಕೆ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 3:57 IST
Last Updated 9 ಆಗಸ್ಟ್ 2022, 3:57 IST
ಬಾಗೇಪಲ್ಲಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಹಮ್ಮಿಕೊಂಡಿದ್ದ ಸಿಪಿಎಂ ರಾಜ್ಯ ಮಟ್ಟದ ರಾಜಕೀಯ ಸಮಾವೇಶದ ಪೂರ್ವಭಾವಿ ಸಭೆಯ ಜಾಥಾಕ್ಕೆ ಜನಪದ ಗಾಯಕ ಪಿಚ್ಚಳ್ಳಿಶ್ರೀನಿವಾಸ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು
ಬಾಗೇಪಲ್ಲಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಹಮ್ಮಿಕೊಂಡಿದ್ದ ಸಿಪಿಎಂ ರಾಜ್ಯ ಮಟ್ಟದ ರಾಜಕೀಯ ಸಮಾವೇಶದ ಪೂರ್ವಭಾವಿ ಸಭೆಯ ಜಾಥಾಕ್ಕೆ ಜನಪದ ಗಾಯಕ ಪಿಚ್ಚಳ್ಳಿಶ್ರೀನಿವಾಸ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು   

ಬಾಗೇಪಲ್ಲಿ: ಸ್ವಾತಂತ್ರ್ಯದ ಪರಿಕಲ್ಪನೆ ಇಲ್ಲದ ಕೋಮುಶಕ್ತಿಗಳ ಕೈಯಲ್ಲಿ ಅಧಿಕಾರ ಇರುವುದರಿಂದ ದೇಶ ಹಾಗೂ ಸಂವಿಧಾನದ ವ್ಯವಸ್ಥೆಗೆ ಗಂಡಾಂತರ ಬಂದಿದೆ. ಮನುವಾದ ತೊಲಗಿ ಮಾನವತಾವಾದ ಸೃಷ್ಟಿಯಾಗಬೇಕು ಎಂದು ಜನಪದ ಗಾಯಕ
ಪಿಚ್ಚಳ್ಳಿಶ್ರೀನಿವಾಸ್ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿ ಮುಂದೆ ಸೋಮವಾರ ಹಮ್ಮಿಕೊಂಡಿದ್ದ ಸಿಪಿಎಂ ರಾಜ್ಯ ಮಟ್ಟದ ರಾಜಕೀಯ ಸಮಾವೇಶದ ಪೂರ್ವಭಾವಿಯ ಸಭೆಯ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ. ಇಂದಿಗೂ ತಳಮಟ್ಟ ಮತ್ತು ಬಡತನರೇಖೆಗಿಂತ ಕಡಿಮೆ ಇರುವವರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಮನೆಗಳ ಮೇಲೆ ತಿರಂಗಾ ಹಾರಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಆದರೆ ಮನೆ ಇಲ್ಲದವರು ತಿರಂಗಾ ಹಾರಿಸುವುದು ಎಲ್ಲಿ’ ಎಂದು ಪ್ರಶ್ನಿಸಿದರು.

ADVERTISEMENT

‘ಕೋಮು ಶಕ್ತಿಗಳ ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಸ್ವಾತಂತ್ರ್ಯದ ಹೋರಾಟಗಳಲ್ಲಿ ಭಾಗಿಯಾಗದವರು, ಅದರ ಗಾಳಿಗಂಧ ತಿಳಿಯದವರು ಇದೀಗ ಮನೆಗಳ ಮೇಲೆ ಧ್ವಜ ಹಾರಿಸಿ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಆಗಿದೆ’ ಎಂದರು.

ಹಿರಿಯ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ದೇಶದಲ್ಲಿ ಕೋಮುವಾದಿಗಳು ಜಾತಿ, ಧರ್ಮಗಳ ನಡುವೆ ಕೋಮುದ್ವೇಷ ಸೃಷ್ಟಿಸಿದ್ದಾರೆ. ಆದರೆ ಮಾನವತಾವಾದಿಗಳು ಜನರ ನಡುವೆ ಸೌಹಾರ್ದತೆ, ಸಾಮರಸ್ಯ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮಾನವತಾವಾದಿಗಳಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸಿಪಿಎಂ ರಾಜ್ಯ ಮಟ್ಟದ ರಾಜಕೀಯ ಸಮಾವೇಶದ ಸಂಚಾಲಕ ಡಾ.ಅನಿಲ್ ಕುಮಾರ್ ಮಾತನಾಡಿ, ‘ಜಾತಿ, ಧರ್ಮಗಳ ಹೆಸರಿನಲ್ಲಿ ಕೋಮು ಸಂಘರ್ಷ ಸೃಷ್ಟಿಸುತ್ತಿರುವ ಬಿಜೆಪಿ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಸರ್ವನಾಶ ಆಗಲಿದೆ’
ಎಂದರು.

ಗೋಲಿಬಾರ್‌ನಲ್ಲಿ ಹುತಾತ್ಮರಾದ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಹಿರಿಯ ಕಮ್ಯೂನಿಸ್ಟ್ ಮುಖಂಡ ಬೂರಗಮಡು ಗುರಾಮರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ತಾಲ್ಲೂಕು ಸಮಿತಿ ಕಾರ್ಯದರ್ಶಿ, ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥಪ್ಪ, ಮುಖಂಡರಾದ ಎಚ್.ಎ.ರಾಮಲಿಂಗಪ್ಪ, ಪಿ.ಮಂಜುನಾಥರೆಡ್ಡಿ, ಬಿಳ್ಳೂರುನಾಗರಾಜ್, ಎಂ.ಎನ್.ರಘುರಾಮರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ, ಶ್ರೀರಾಮನಾಯಕ್, ಹೇಮಚಂದ್ರ, ಒಬಳರಾಜು, ಆಂಜನೇಯರೆಡ್ಡಿ, ರಾಮಪ್ಪ, ಗೊವರ್ಧನಚಾರಿ, ಎ.ಎನ್.ಶ್ರೀರಾಮಪ್ಪ, –ಎನ್.ಎಸ್.ಚಲಪತಿ, ಸೋಮಶೇಖರರೆಡ್ಡಿ, ದೇವಿಕುಂಟೆಶ್ರೀನಿವಾಸ್, ಶಂಕರ, ಫಾತಿಮಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.